ಮರುಕಳಿಸಿದ ವಿಷ ಪ್ರಸಾದ ಪ್ರಕರಣ: ಮಹಿಳೆ ಸಾವು, 10 ಜನ ಗಂಭೀರ

ಶನಿವಾರ, 26 ಜನವರಿ 2019 (16:49 IST)
ಸುಳ್ವಾಡಿಯ ವಿಷ ಪ್ರಸಾದ ಪ್ರಕರಣ ಜನಮನದಲ್ಲಿ ಮಾಸುವ ಮುನ್ನವೇ ಮತ್ತೊಂದು ಘಟನೆ ಮರುಕಳಿಸಿದೆ.

ಚಿಂತಾಮಣಿಯಲ್ಲಿ ವಿಷ ಪ್ರಸಾದ ಸೇವನೆ ಘಟನೆ ನಡೆದಿದ್ದು, ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.  ಘಟನೆಯಲ್ಲಿ ಮಹಿಳೆಯೊಬ್ಬಳು ಸಾವನ್ನಪ್ಪಿದ್ದು, 10ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದಾರೆ.

ಚಿಂತಾಮಣಿಯ ಗಂಗಮ್ಮ ದೇವಾಲಯದಲ್ಲಿ ಪ್ರಸಾದ ಸೇವಿಸಿದವರ ಪೈಕಿ ಚಿಂತಾಮಣಿಯ ಶ್ರೀರಾಮನಗರದ ಕವಿತಾ (28) ಮೃತಪಟ್ಟಿದ್ದಾರೆ. ಪ್ರಸಾದ ಸೇವಿಸಿದ ಗಂಗಾಧರ, ಗಾನವಿ, ನಾರಾಯಣಪ್ಪ, ವೆಂಕಟರಮಣಪ್ಪ, ಚರಣ್ ಸೇರಿ 10 ಮಂದಿ ಅಸ್ವಸ್ಥರಾಗಿ, ಕೋಲಾರದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  ಪ್ರಾಣಾಪಾಯದಿಂದ ಅಸ್ವಸ್ಥರು ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಪ್ರಸಾದದ ರೂಪದಲ್ಲಿ ನೀಡಿದ ಪಾಯಸ ಮತ್ತು ಕೇಸರಿಬಾತ್ನಲ್ಲಿ ಗೇರುಬೀಜದ ಮಿಶ್ರಣ ಇತ್ತು ಎನ್ನಲಾಗಿದೆ. ಇದು ಭಕ್ತರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಲು ಕಾರಣ ಎನ್ನುವುದು ಮೇಲ್ನೋಟಕ್ಕೆ ತಿಳಿದುಬಂದಿದೆ.

ಪ್ರಸಾದಕ್ಕೆ ನೀಡಿದ ಕೇಸರಿಬಾತ್ ಮತ್ತು ಪಾಯಸವನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಮಾಹಿತಿ ಕಲೆಹಾಕಲಾಗುತ್ತಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 6 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಕೇಂದ್ರ ವಲಯದ ಐಜಿಪಿ ದಯಾನಂದ್ ತಿಳಿಸಿದ್ದಾರೆ. ಚಿಂತಾಮಣಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.  


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ