ಕೊಳೆತ ತರಕಾರಿ, ಹುಳ ಹತ್ತಿದ ಬೆಳೆಕಾಳು ಇದು ಹಾಸ್ಟೆಲ್ ಊಟದ ಹಾಡುಪಾಡು!
ಗುರುವಾರ, 22 ನವೆಂಬರ್ 2018 (20:53 IST)
ಸರಕಾರ ವಿದ್ಯಾರ್ಥಿಗಳಿಗಾಗಿ ಏನೆಲ್ಲ ಅನುಕೂಲತೆಗಳನ್ನು ಮಾಡಿಕೊಡುತ್ತದೆ. ಆದರೆ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಆ ಅನುಕೂಲತೆಗಳು ಯಾವ ರೀತಿ ಹಳ್ಳ ಹಿಡಿಯುತ್ತವೆ ಅನ್ನೋದಕ್ಕೆ ಸಾಕ್ಷಿ ಸಾಕಷ್ಟಿವೆ.
ಗದಗ ನಗರದ ಕಳಸಾಪೂರ ರಸ್ತೆ ಬಳಿ ಇರುವ ಮೆಟ್ರಿಕ್ ನಂತರದ ಎಸ್ ಸಿ, ಎಸ್ ಟಿ ವಸತಿ ನಿಲಯದಲ್ಲಿ ತರಕಾರಿ, ಬೆಳೆ, ಅಕ್ಕಿ ಹೀಗೆ ಎಲ್ಲ ಧವಸ ಧಾನ್ಯಗಳಿಗೂ ಅನುದಾನ ಇರುತ್ತೆ. ಆದರೆ ಇಲ್ಲಿ ಆ ಅನುದಾನ ಅಧಿಕಾರಿಗಳ ಹಾಗೂ ಅಲ್ಲಿಯ ಸಿಬ್ಬಂದಿಗಳ ಜೇಬಿ ಸೇರ್ತಿದೆ ಅನ್ನೋದರಲ್ಲಿ ಎರೆಡು ಮಾತಿಲ್ಲ. ಯಾಕಂದ್ರೆ ಕೊಳೆತು ಹೋಗಿರೋ ತರಕಾರಿ, ಹುಳ ಹತ್ತಿರುವ ಬೆಳೆಕಾಳು, ಕೆಟ್ಟು ಹೋಗಿರುವ ಆಹಾರ ಸಾಮಗ್ರಿ ಬಳಸಿ ವಿದ್ಯಾರ್ಥಿಗಳಿಗೆ ಊಟ ಕೊಡ್ತಿದಾರೆ. ಹಾಸ್ಟೆಲ್ ನ ಅವ್ಯವಸ್ಥೆ ಎಷ್ಟರ ಮಟ್ಟಿಗೆ ಇದೆ ಎಂದರೆ ವಿದ್ಯಾರ್ಥಿಗಳಿಗೆ ಕೈ ತೊಳೆಯಲು ಸಿಂಕ್ ವ್ಯವಸ್ಥೆ ಇದ್ದರೂ ಸಿಂಕ್ ಗಳು ಗಲೀಜಿನ ನೀರಿನಿಂದ ತುಂಬಿ ನಲ್ಲಿ ಸಹ ಕೆಟ್ಟು ನಿಂತಿವೆ.
ವಿದ್ಯಾರ್ಥಿಗಳಿಗೆ ಸೋಲಾರ್ ಮೂಲಕ ಬಿಸಿನೀರಿನ ವ್ಯವಸ್ಥೆ ಇದ್ರೂ ಸಹ ಹೊರಗಡೆ ಇರುವ ಟ್ಯಾಂಕನಲ್ಲಿ ತಣ್ಣಿರು ಸ್ನಾನ ಮಾಡುವ ಹಾಗಾಗಿದೆ. ಹೇಳುವವರಿಲ್ಲ ಕೇಳುವವರಿಲ್ಲ ಅನ್ನೋ ಹಾಗಾಗಿದೆ ಈ ಹಾಸ್ಟೆಲ್ ನ ದುಸ್ಥಿತಿ. ಈ ಅವ್ಯವಸ್ಥೆಗೆ ಬೇಸತ್ತು ಹಾಸ್ಟೆಲ್ ನ ವಿದ್ಯಾರ್ಥಿಗಳು ಯಾವುದೇ ಮೆನು ಪ್ರಕಾರ ಊಟ ಕೊಡ್ತಿಲ್ಲ ಹಾಗೂ ಮೂಲ ಸೌಲಭ್ಯಗಳ ಕೊರತೆ ಇದೆ ಅಂತ ಹೇಳಿ ಪ್ರತಿಭಟನೆ ನಡೆಸಿದ್ದಾರೆ. ಹಾಸ್ಟೆಲ್ ವಾರ್ಡನ್ ವಿರುದ್ಧ ಪ್ರತಿಭಟಿಸ್ತರೋ ವಿದ್ಯಾರ್ಥಿಗಳು ಅವ್ಯವಸ್ಥೆ ಸರಿಪಡಿಸುವಂತೆ ಆಗ್ರಹ ಮಾಡಿದ್ದಾರೆ.