ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರ ನಡೆಸಲುದ್ದೇಶಿಸಿರುವ ಜಾತಿ ಗಣತಿ ಪ್ರಕ್ರಿಯೆಗೆ ಈಗ ಸಚಿವ ಸಂಪುಟದಲ್ಲೇ ಅಪಸ್ವರ ಕೇಳಿಬಂದಿದೆ. ಕ್ರಿಶ್ಚಿಯನ್ ಜೊತೆ ಹಿಂದೂ ಜಾತಿಗಳ ಸೇರ್ಪಡೆಗೆ ಸಚಿವರಿಂದಲೇ ತೀವ್ರ ವಿರೋಧ ವ್ಯಕ್ತವಾಗಿದೆ.
ಕ್ರಿಶ್ಚಿಯನ್ ಜೊತೆಗೆ ಲಿಂಗಾಯತ ಕ್ರಿಶ್ಚಿಯನ್, ಕುರುಬ ಕ್ರಿಶ್ಚಿಯನ್, ಬ್ರಾಹ್ಮಣ ಕ್ರಿಶ್ಚಿಯನ್ ಎಂದೆಲ್ಲಾ ತಲೆಬುಡವಿಲ್ಲದೇ ಹೊಸ ಹೊಸ ಜಾತಿಗಳನ್ನು ಸೃಷ್ಟಿ ಮಾಡಲಾಗಿತ್ತು. ಇದಕ್ಕೆ ಸಚಿವ ಸಂಪುಟ ಸಭೆಯಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ.
ಈ ರೀತಿ ಹೊಸ ಜಾತಿಗಳನ್ನು ಯಾವ ಆಧಾರದಲ್ಲಿ ಸೃಷ್ಟಿ ಮಾಡಲಾಗಿದೆ? ಈ ಜಾತಿಗಳನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ ಎಂದು ಹಿರಿಯ ಸಚಿವರೇ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಚಿವರ ವಿರೋಧಕ್ಕೆ ಸಿಎಂ ಸಿದ್ದರಾಮಯ್ಯನವರೇ ಬೆಚ್ಚಿಬಿದ್ದಿದ್ದಾರೆ.
ಹೊಸ ಜಾತಿಗಳನ್ನು ಸೃಷ್ಟಿಸಿರುವುದರಿಂದ ಜಾತಿಗಣತಿ ಗೊಂದಲದ ಗೂಡಾಗಿದೆ. ಇದುವರೆಗೆ ವಿಪಕ್ಷ ಬಿಜೆಪಿ ಮಾತ್ರ ಆಕ್ರೋಶ ವ್ಯಕ್ತಪಡಿಸಿತ್ತು. ಆಗೆಲ್ಲಾ ಇದರಲ್ಲಿ ತಪ್ಪೇನಿದೆ? ಮತಾಂತರವಾದವರಿಗೆ ಸವಲತ್ತು ಸಿಗುವುದು ಬೇಡ್ವಾ ಎಂದು ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದರು. ಆದರೆ ಈಗ ಸ್ವಪಕ್ಷೀಯರಿಂದಲೇ ವಿರೋಧ ವ್ಯಕ್ತವಾಗಿರುವುದರಿಂದ ಹೊಸ ಜಾತಿ ಸೃಷ್ಟಿಗೆ ಬ್ರೇಕ್ ಹಾಕಲು ತೀರ್ಮಾನಿಸಿದ್ದಾರೆ. ಯಾರಿಗೂ ಜಗ್ಗದ ಸಿಎಂ ಈಗ ಸ್ವಪಕ್ಷೀಯರಿಂದಲೇ ವಿರೋಧ ವ್ಯಕ್ತವಾಗಿದ್ದಕ್ಕೆ ಬೆಲೆ ಕೊಡಲೇಬೇಕಾಯಿತು.