ಬೆಂಗಳೂರು : ಇನ್ಫೋಸಿಸ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ(ಸಿಇಒ) ಸಲೀಲ್ ಪರೇಖ್ ಈ ವರ್ಷ ತಮ್ಮ ವೇತನವನ್ನು ಬರೋಬ್ಬರಿ ಶೇ.88 ರಷ್ಟು ಹೆಚ್ಚಿಸಿಕೊಂಡಿದ್ದಾರೆ.
ಈ ಹೆಚ್ಚಳದೊಂದಿಗೆ ಪರೇಖ್ ಇದೀಗ ವರ್ಷಕ್ಕೆ 79.75 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ. ಈ ಹಿಂದೆ ಪರೇಖ್ 42 ಕೋಟಿ ರೂ. ವಾರ್ಷಿಕ ವೇತನವನ್ನು ಪಡೆಯುತ್ತಿದ್ದರು. ಇದೀಗ ತಮ್ಮ ಸಂಭಾವನೆಯಲ್ಲಿ ಭಾರೀ ಏರಿಕೆ ಕಂಡಿರುವುದರೊಂದಿಗೆ ದೇಶದಲ್ಲೇ ಅತೀ ಹೆಚ್ಚು ಮೊತ್ತದ ಸಂಭಾವನೆ ಪಡೆಯುವ ಸಿಇಒ ಎನಿಸಿಕೊಂಡಿದ್ದಾರೆ.
ಇನ್ಫೋಸಿಸ್ ತನ್ನ ಷೇರುದಾರರ ವಾರ್ಷಿಕ ವರದಿಯಲ್ಲಿ ಸಿಇಒ ವೇತನದ ವಿವರಗಳನ್ನು ಬಹಿರಂಗಪಡಿಸಿದೆ. ಇತ್ತೀಚೆಗೆ ಇನ್ಫೋಸಿಸ್ ಕಂಪನಿಯ ಉದ್ಯಮದಲ್ಲಿ ಪ್ರಮುಖ ಬೆಳವಣಿಗೆ ಕಂಡುಬಂದಿದ್ದು, ಇದರಲ್ಲಿ ಪರೇಖ್ ಪ್ರಮುಖ ಪಾತ್ರ ವಹಿಸಿದ್ದಾರೆ. ಈ ಹಿನ್ನೆಲೆ ಅವರ ವೇತನವನ್ನು ಹೆಚ್ಚಿಸಲಾಗಿದೆ ಎಂದು ವರದಿಯಾಗಿದೆ.
ಪರೇಖ್ ಇನ್ಫೋಸಿಸ್ನ ಸಿಇಒ ಆಗಿ ಮರುನೇಮಕಗೊಂಡ ಕೆಲವೇ ದಿನಗಳಲ್ಲಿ ಅವರ ವೇತನ ಹೆಚ್ಚಳವಾಗಿದೆ. ಪರೇಖ್ 2022 ಜುಲೈ 1 ರಿಂದ 2027 ಮಾರ್ಚ್ 31ರ ವರೆಗೆ 5 ವರ್ಷಗಳ ಕಾಲ ಇನ್ಫೋಸಿಸ್ನ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಮುಂದುವರಿಯಲಿದ್ದಾರೆ.