ಬ್ರಿಗೇಡ್‌ಗೂ ನನಗೂ ಯಾವುದೇ ಸಂಬಂಧವಿಲ್ಲ: ಉಲ್ಟಾ ಹೊಡೆದ ಈಶ್ವರಪ್ಪ

ಸೋಮವಾರ, 17 ಅಕ್ಟೋಬರ್ 2016 (18:58 IST)
ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ಗೂ ನನಗೂ ಯಾವುದೇ ಸಂಬಂಧವಿಲ್ಲ. ಅದು ರಾಜಕಿಯೇತರ ಸಂಘಟನೆ. ಬ್ರಿಗೇಡ್ ಆಯೋಜಕರು ಬೇಕಿದ್ದರೆ ಕಾಂಗ್ರೆಸ್ ನಾಯಕರನ್ನೂ ಸಹ ಕರೆಯಬಹುದು ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ.
 
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಜೊತೆ ಮಾತಾಡಿ ಸಮಸ್ಯೆ ಬಗೆಹರಿಸಿಕೊಂಡಿದ್ದೇನೆ. ಇನ್ನೂ ಮುಂದೆ ಬ್ರಿಗೇಡ್ ವಿಷಯಕ್ಕೆ ತಲೆಹಾಕುವುದಿಲ್ಲ. ಬ್ರಿಗೇಡ್ ಪದಾಧಿಕಾರಿಗಳ ಸಭೆಗೆ ಆಮಂತ್ರಣ ನೀಡಿದರೇ ಮಾತ್ರ ಹೋಗುತ್ತೇನೆ ಎಂದು ತಿಳಿಸಿದರು. 
 
ಪಕ್ಷದ ಆಂತರಿಕ ಬಿಕ್ಕಟ್ಟು ಬೀದಿಗೆ ಬರಬಾರದಿತ್ತು. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸ್ಪಷ್ಟ ಬಹುಮತದೊಂದಿಗೆ ಗೆಲ್ಲಿಸಿ ಬಿ.ಎಸ್.ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಮಾಡುವುದೇ ನಮ್ಮ ಗುರಿ ಎಂದು ಹೇಳಿದರು. 
 
ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ಸ್ಥಾಪನೆ ಕುರಿತು ಬಿ.ಎಸ್.ಯಡಿಯೂರಪ್ಪ ಹಾಗೂ ಕೆ.ಎಸ್.ಈಶ್ವರಪ್ಪನವರ ಮಧ್ಯ ವೈಮನಸ್ಸು ಉಂಟಾದ ಹಿನ್ನೆಲೆಯಲ್ಲಿ ಪಕ್ಷದ ವೇದಿಕೆ ಬಿಟ್ಟು ಪ್ರತ್ಯೇಕ ಸಂಘಟನೆ ಕಟ್ಟುವುದು ಸರಿಯಲ್ಲ. ಹೀಗಾಗಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ಕೈಬಿಡಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್‌ಲಾಲ್ ಅವರು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪನವರಿಗೆ ತಾಕೀತು ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ