ಮೋದಿ ಮುಖ ನೋಡಿ ಬಿಜೆಪಿಗೆ ಬೆಂಬಲ ಕೊಟ್ಟಿದ್ದೆ: ಸುಮಲತಾ ಅಂಬರೀಶ್

Krishnaveni K

ಮಂಗಳವಾರ, 30 ಜನವರಿ 2024 (10:40 IST)
ಬೆಂಗಳೂರು: ಮಂಡ್ಯ ಲೋಕಸಭೆ ಚುನಾವಣೆ ಟಿಕೆಟ್ ಹಂಚಿಕೆ ವಿಚಾರ ಬಿಜೆಪಿ ಆಕಾಂಕ್ಷಿ ಸುಮಲತಾ ಅಂಬರೀಶ್ ಮತ್ತು ಜೆಡಿಎಸ್ ನಡುವೆ ಕಗ್ಗಂಟಾಗುತ್ತಿದೆ.

ಸ್ಪರ್ಧಿಸಿದರೆ ಮಂಡ್ಯದಿಂದ ಮಾತ್ರ ಎಂದು ಹಾಲಿ ಸಂಸದೆ ಸುಮಲತಾ ಅಂಬರೀಶ್ ಎಂದು ಖಡಾ ಖಂಡಿತವಾಗಿ ಹೇಳುತ್ತಿದ್ದಾರೆ. ಅತ್ತ ಜೆಡಿಎಸ್ ನಾಯಕ ಕುಮಾರಸ್ವಾಮಿ ಮಂಡ್ಯ ಟಿಕೆಟ್ ಗಾಗಿ ಪಟ್ಟು ಹಿಡಿದಿದ್ದಾರೆ. ಹೀಗಾಗಿ ಎರಡೂ ಪಕ್ಷಗಳಿಗೆ ಈಗ ಮಂಡ್ಯ ಟಿಕೆಟ್ ಕಗ್ಗಂಟಾಗಿದೆ.

ಕಳೆದ ಲೋಕಸಭೆ ಚುನಾವಣೆಯಲ್ಲಿ ಸುಮಲತಾ ಪಕ್ಷೇತರರಾಗಿ ಸ್ಪರ್ಧಿಸಿ ಜೆಡಿಎಸ್ ನ ನಿಖಿಲ್ ಕುಮಾರಸ್ವಾಮಿ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದರು. ಬಳಿಕ ಪ್ರಧಾನಿ ಮೋದಿ ಮೇಲಿನ ಅಭಿಮಾನದಿಂದ ಸುಮಲತಾ ಬಿಜೆಪಿ ಸೇರಿಕೊಂಡಿದ್ದರು. ಆದರೆ ಈಗ ರಾಜ್ಯದಲ್ಲಿ ಮುಂದಿನ ಲೋಕಸಭೆ ಚುನಾವಣೆಗೆ ಜೆಡಿಎಸ್ ಜೊತೆಗೆ ಬಿಜೆಪಿ ಮೈತ್ರಿ ಮಾಡಿಕೊಂಡಿದೆ. ಇದರಿಂದಾಗಿ ಎರಡೂ ಪಕ್ಷಗಳು ಸಮನ್ವಯದಿಂದ ಸೀಟು ಹಂಚಿಕೆ ಮಾಡಿಕೊಳ್ಳುತ್ತಿದೆ.

ಆದರೆ ಜೆಡಿಎಸ್ ಗೆ ಮೊದಲಿನಿಂದಲೂ ಮಂಡ್ಯ ಕ್ಷೇತ್ರದ ಮೇಲೆ ಕಣ್ಣಿದೆ. ಇದೀಗ ಬಿಜೆಪಿ ಜೊತೆ ಸಖ್ಯ ಮಾಡಿಕೊಂಡಿರುವುದರಿಂದ ಮಂಡ್ಯ ಟಿಕೆಟ್ ಸುಲಭವಾಗಿ ಸಿಗಬಹುದು ಎಂದು ಲೆಕ್ಕಾಚಾರ ಹಾಕಿದೆ. ಆದರೆ ಸುಮಲತಾ ಮಂಡ್ಯ ಟಿಕೆಟ್ ಗೆ ಪಟ್ಟು ಹಿಡಿದಿದ್ದಾರೆ.

ನಾನು ಪ್ರಧಾನಿ ಮೋದಿಯವರ ಕೆಲಸಗಳನ್ನು ನೋಡಿ ಬಿಜೆಪಿಗೆ ಬೆಂಬಲ ಕೊಟ್ಟೆ. ಈಗಲೂ ಬಿಜೆಪಿ ಜೊತೆಗೇ ಇದ್ದೇನೆ. ಒಂದು ವೇಳೆ ಮುಂದಿನ ಲೋಕಸಭೆ ಚುನಾವಣೆಗೆ ಬಿಜೆಪಿಯಿಂದಲೇ ಸ್ಪರ್ಧಿಸಿದರೂ ಮಂಡ್ಯದಿಂದ ಮಾತ್ರ ಸ್ಪರ್ದಿಸುತ್ತೇನೆ. ಬೇರೆ ಕ್ಷೇತ್ರದಿಂದ ಸ್ಪರ್ಧಿಸುವುದಾದರೆ ನನಗೆ ರಾಜಕೀಯವೇ ಬೇಡ ಎಂದಿದ್ದಾರೆ ಸುಮಲತಾ. ಹೀಗಾಗಿ ಅವರು ಮುಂದಿನ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಸಿಗದೇ ಇದ್ದರೆ ಪಕ್ಷೇತರರಾಗಿ ಸ್ಪರ್ಧಿಸಿದರೂ ಅಚ್ಚರಿಯಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ