ಪ್ರಭಾವಿಗಳು ಸಹಾಯ ಮಾಡುತ್ತಾರೆ ಎಂಬ ಭ್ರಮೆಯಲ್ಲಿದ್ದೆ : ಆನಂದ ಸಿಂಗ್
ಗುರುವಾರ, 12 ಆಗಸ್ಟ್ 2021 (09:25 IST)
ಹೊಸಪೇಟೆ (ಆ.12): ರಾಜಕಾರಣದಲ್ಲಿ ನನ್ನನ್ನು ರಕ್ಷಣೆ ಮಾಡುವವರು ಬಹಳಷ್ಟು ಮಂದಿ ಇದ್ದಾರೆ, ಬಹಳ ದೊಡ್ಡ ಪ್ರಭಾವಿಗಳು ಇದ್ದಾರೆ ಎಂಬ ಆತ್ಮವಿಶ್ವಾಸದಲ್ಲಿದ್ದೆ. ಅದೆಲ್ಲ ಭ್ರಮೆ ಎನ್ನುವುದು ಇದೀಗ ಗೊತ್ತಾಯ್ತು. ವೇಣುಗೋಪಾಲ ಸ್ವಾಮಿ ದೇಗುಲದಿಂದಲೇ ನನ್ನ ರಾಜಕೀಯ ಆರಂಭವಾಗಿದೆ.
ಈ ದೇಗುಲದಿಂದಲೇ ಅಂತ್ಯವೂ ಆಗಬಹುದು, ಇಲ್ಲವೇ ಮರು ಆರಂಭವೂ ಆಗಬಹುದು ಎಂದು ಪರಿಸರ ಹಾಗೂ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.
ಖಾತೆ ವಿಚಾರವಾಗಿ ಅಸಮಾಧಾನಗೊಂಡಿರುವ ಆನಂದ್ ಸಿಂಗ್ ನಗರದ ಪಟೇಲ್ನಗರದಲ್ಲಿರುವ ವೇಣುಗೋಪಾಲಸ್ವಾಮಿ ದೇಗುಲದಲ್ಲಿ ಬುಧವಾರ ನಡೆದ ಜೀರ್ಣೋದ್ಧಾರ ಪೂಜೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ನಾನು 2008ರಿಂದ ರಾಜಕೀಯದಲ್ಲಿದ್ದೇನೆ. ಈ ಹದಿನೈದು ವರ್ಷದ ರಾಜಕೀಯ ಜೀವನದಲ್ಲಿ ನನಗೆ ರಾಜ್ಯದಲ್ಲಿ ಬಹಳಷ್ಟುನಾಯಕರು, ಆತ್ಮೀಯರು, ಹಿತೈಷಿಗಳು, ಸ್ನೇಹಿತರು ಇದ್ದಾರೆ ಎಂದು ನಾನು ಭಾವಿಸಿದ್ದೆ. ಬಹಳಷ್ಟುಮಂದಿ ನನ್ನನ್ನು ರಕ್ಷಣೆ ಮಾಡುವವರು ರಾಜಕೀಯದಲ್ಲಿದ್ದಾರೆ, ಬಹಳ ದೊಡ್ಡ ಪ್ರಭಾವಿ ಸ್ಥಾನಗಳಲ್ಲಿದ್ದಾರೆಂಬ ಆತ್ಮವಿಶ್ವಾಸದಲ್ಲಿ ಇದ್ದೆ. ಆದರೆ, ಅದೆಲ್ಲ ಭ್ರಮೆ ಅನ್ನುವುದು ಇದೀಗ ಗೊತ್ತಾಯ್ತು. ನನಗೆ ಬ್ಲ್ಯಾಕ್ಮೇಲ್ ರಾಜಕಾರಣ ಮಾಡಲು ಬರುವುದಿಲ್ಲ. ಜತೆಗೆ ಹೊಗಳಿಕೆ ರಾಜಕಾರಣವೂ ಗೊತ್ತಿಲ್ಲ. ಏನಿದ್ದರೂ ನೇರವಾಗಿ ಮಾತನಾಡುವೆ ಎಂದರು.
ಬಿಎಸ್ವೈ ಭೇಟಿಯಾಗಿರುವೆ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನನಗೆ ಎಲ್ಲ ನೀಡಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಏನೂ ನೀಡಿಲ್ಲ ಎಂದು ಹೇಳಲಾರೆ. ಆದರೆ, ಅಂದುಕೊಂಡಿದ್ದು ಯಾವುದೂ ಆಗಲಿಲ್ಲ ಅನ್ನುವಂತೆಯೂ ಇಲ್ಲ, ಆಗಿದೆ ಅನ್ನುವಂತೆಯೂ ಇಲ್ಲ. ಆ.8ರಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಖುದ್ದು ಭೇಟಿಯಾಗಿ ಮನವಿ ಮಾಡಿಕೊಂಡಿದ್ದೇನೆ. ಜತೆಗೆ ಮಾಧ್ಯಮಗಳಿಗೂ ನೇರವಾಗಿಯೇ ಖಾತೆ ವಿಷಯದ ಬಗ್ಗೆ ಹೇಳಿದ್ದೇನೆ. ನಾನು ಮುಚ್ಚುಮರೆ ರಾಜಕಾರಣ ಮಾಡಲ್ಲ, ಕೆಲವೊಮ್ಮೆ ರಾಜಕೀಯ ಅನಿವಾರ್ಯ, ಕೆಲವೊಮ್ಮೆ ಅನಿವಾರ್ಯವಲ್ಲ ಎಂದು ಸ್ಪಷ್ಟಪಡಿಸಿದರು.
ಸದ್ಯ ನಾನು ಯುದ್ಧಭೂಮಿಯಲ್ಲಿ ಅರ್ಜುನ. ನನ್ನ ಹಿಂದೆ ವೇಣುಗೋಪಾಲಸ್ವಾಮಿ ಮಾತ್ರ ಇದ್ದಾನೆ. ಪಕ್ಷಕ್ಕೆ, ಸರ್ಕಾರಕ್ಕೆ ಮುಜುಗರ ತರುವ ರೀತಿ ನಾನು ಮಾತನಾಡಲ್ಲ. ರಾಜಕೀಯವಾಗಿ ಹೆಚ್ಚು ರಿಯಾಕ್ಟ್ ಮಾಡಲ್ಲ. ಆ ರೀತಿ ನನಗೆ ನಿರ್ದೇಶನ ಬಂದಿದೆ ಎಂದರು.