ಶಿವಮೊಗ್ಗ : ನಿಮ್ಮ ಪ್ರೀತಿಗೆ ಕರ್ನಾಟಕದ ಅಭಿವೃದ್ಧಿ ಮಾಡಿ ಬಡ್ಡಿ ಸಮೇತ ತೀರಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು. ಆಯನೂರಿನಲ್ಲಿ ನಡೆದ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು, ಯಡಿಯೂರಪ್ಪ ಅವರ ನೆಲದಿಂದ ರಾಜ್ಯದ ಜನರಿಗೆ ಅಸಲಿ ಗ್ಯಾರಂಟಿ ನೀಡುತ್ತೇನೆ.
ರಾಜ್ಯದಲ್ಲಿ ಒಂದು ಬಲೂನ್ಗೆ ಹವಾ ತುಂಬಿದೆ. ಸುಳ್ಳು ಗಾಳಿ ತುಂಬಿ ಬಲೂನ್ ಹಾರಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಯಾವುದೇ ಪ್ರಯೋಜನ ಆಗದು. ಮತದಾರರೇ ಆ ಬಲೂನ್ ನುಚ್ಚುನೂರು ಮಾಡಿದ್ದಾರೆ. ಹೆದರಿದ ಕಾಂಗ್ರೆಸ್ ಪ್ರಚಾರಕ್ಕೆ ಯಾರು ಯಾರನ್ನೋ ಕರೀತಿದ್ದಾರೆ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯ ರಿವರ್ಸ್ ಗೇರ್ನಲ್ಲಿ ಹೋಗುತ್ತದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಜನರು ಎಚ್ಚರಿಕೆಯಿಂದ ಇರಿ. ಬಂಡವಾಳಶಾಹಿಗಳನ್ನು ಹೊರದಬ್ಬಲು ಕಾಂಗ್ರೆಸ್ ಯೋಜಿಸಿದೆ. ಭ್ರಷ್ಟಾಚಾರ, ತುಷ್ಟೀಕರಣ ಹೊಂದಿದ ಸರ್ಕಾರದಿಂದ ಅಭಿವೃದ್ಧಿ ಸಾಧ್ಯವೇ? ಕಾಂಗ್ರೆಸ್ ಯುವ ಜನರ ಬಗ್ಗೆ ಯಾವತ್ತೂ ಯೋಚಿಸಿಲ್ಲ. ಆದರೆ ಬಿಜೆಪಿ ಮೇಡ್ ಇನ್ ಇಂಡಿಯಾ ಕಲ್ಪನೆಯನ್ನು ಹೊಂದಿದೆ. ನಿಮ್ಮ ಹಿರಿಯರು ಪಟ್ಟ ಸಂಕಟ ನಿಮಗೂ ಸಿಗಲು ನಾನು ಅವಕಾಶ ಕೊಡುವುದಿಲ್ಲ ಎಂದರು.
ಕಾಂಗ್ರೆಸ್ನ ಅಭಿವೃದ್ಧಿ ಕೇವಲ ಕಾಗದದಲ್ಲಿ ಮಾತ್ರವಾಗಿತ್ತು. ಕಾಂಗ್ರೆಸ್ ರಾಜ್ಯದಲ್ಲಿ 5 ವರ್ಷದಲ್ಲಿ 10 ಲಕ್ಷ ಉದ್ಯೋಗ ನೀಡುವ ಭರವಸೆ ನೀಡಿದೆ. ಅಂದರೆ ಪ್ರತಿ ವರ್ಷ 2 ಲಕ್ಷ ಉದ್ಯೋಗ ನೀಡುತ್ತದೆ. ಕಾಂಗ್ರೆಸ್ ಸುಳ್ಳು ಭರವಸೆ ಇಲ್ಲೇ ಗೊತ್ತಾಗುತ್ತದೆ ಎಂದು ಕಿಡಿಕಾರಿದ ಅವರು, ಬಿಜೆಪಿ ಮುದ್ರಾ ಯೋಜನೆಯಿಂದ ಯುವಕರಿಗೆ 20 ಲಕ್ಷ ಕೋಟಿ ರೂ. ನೆರವು ನೀಡಿದೆ. ಇದರ ಲಾಭ ಶಿವಮೊಗ್ಗದ ಸಾವಿರಾರು ಜನರಿಗೆ ಸಿಕ್ಕಿದೆ. ರಾಜ್ಯದಲ್ಲಿ ಬಿಜೆಪಿ ಮೂರೂವರೆ ವರ್ಷ ಅಧಿಕಾರ ಮಾಡಿದೆ. ಪ್ರತಿ ವರ್ಷ 13 ಲಕ್ಷಕ್ಕೂ ಹೆಚ್ಚು ಉದ್ಯೋಗ ನೀಡಿದೆ ಎಂದು ಹೇಳಿದರು.