ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿದಲ್ಲಿ ನಿಭಾಯಿಸುವೆ: ಕೆ.ಎಚ್.ಮುನಿಯಪ್ಪ

ಸೋಮವಾರ, 17 ಏಪ್ರಿಲ್ 2017 (15:45 IST)
ನನಗೆ ಪಕ್ಷದಲ್ಲಿ ಕೆಲಸ ಮಾಡಿದ ಅನುಭವವಿದೆ. ಎಲ್ಲಾ ಜಾತಿಯವರನ್ನು ಕೂಡಿಸಿಕೊಂಡು ಹೋಗುವುದರಿಂದ ಈ ಎರಡು ಆಧಾರಗಳ ಮೇಲೆ ನನಗೆ ಕೆಪಿಸಿಸಿ ಅಧ್ಯಕ್ಷರಾಗಲು ಅವಕಾಶ ಕೊಡಿ ಎಂದು ಹೈಕಮಾಂಡ್‌ಗೆ ಮನವಿ ಮಾಡುತ್ತೇನೆ ಎಂದು ಸಂಸದ ಕೆ.ಎಚ್.ಮುನಿಯಪ್ಪ ಹೇಳಿದ್ದಾರೆ.
 
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೊಡಿ ಎಂದು ದೆಹಲಿಗೆ ಹೋಗುವುದಿಲ್ಲ. ಅವಕಾಶ ಕೊಟ್ಟರೆ ಯಶಸ್ವಿಯಾಗಿ ನಿಭಾಯಿಸುತ್ತೇನೆ ಎನ್ನುವ ವಿಶ್ವಾಸವಿದೆ. ಕೆಪಿಸಿಸಿ ಅಧ್ಯಕ್ಷರಾಗಲು ಪಕ್ಷದಲ್ಲಿ ಸಮರ್ಥ ನಾಯಕರಿದ್ದಾರೆ ಎಂದು ತಿಳಿಸಿದ್ದಾರೆ.
 
ಇಂಧನ ಖಾತೆ ಸಚಿವ ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾದರೂ ನನಗೆ ಸಂತೋಷವಾಗುತ್ತದೆ. ಯಾರು ಕೆಪಿಸಿಸಿ ಅಧ್ಯಕ್ಷರಾಗಬೇಕು ಎನ್ನುವುದನ್ನು ಅಂತಿಮವಾಗಿ ಹೈಕಮಾಂಡ್ ತೀರ್ಮಾನಿಸುತ್ತದೆ ಎಂದರು.
 
ಕೆಪಿಸಿಸಿ ಅಧ್ಯಕ್ಷರಾಗಿ ಜಿ.ಪರಮೇಶ್ವರ್ ಮುಂದುವರಿದರೂ ಅಭ್ಯಂತರವಿಲ್ಲ. ಕೆಪಿಸಿಸಿ ಅಧ್ಯಕ್ಷರಾಗುವ ಬಯಕೆಯನ್ನು ಬಹಿರಂಗಪಡಿಸಿದ್ದೇನೆ ಎಂದು ಸಂಸದ ಕೆ.ಎಚ್.ಮುನಿಯಪ್ಪ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ