ನಟಿ ರಮ್ಯಾ ಕೇಳಿದ್ರೆ ಮಂಡ್ಯ ಕ್ಷೇತ್ರ ಬಿಟ್ಟುಕೊಡಲು ಸಿದ್ಧ: ಅಂಬರೀಶ್
ಶುಕ್ರವಾರ, 18 ನವೆಂಬರ್ 2016 (17:54 IST)
ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಕೇಳಿಕೊಂಡರೆ ಮಂಡ್ಯ ಕ್ಷೇತ್ರವನ್ನು ಬಿಟ್ಟುಕೊಡಲು ಸಿದ್ಧ. ಏಕೆಂದರೆ, ಚಿಕ್ಕವರು ಸಹ ರಾಜಕೀಯದಲ್ಲಿ ಬೆಳೆಯಲಿ ಎನ್ನುವುದು ನಮ್ಮ ಆಶಯ ಎಂದು ಮಾಜಿ ಸಚಿವ ಹಾಗೂ ನಟ ಅಂಬರೀಶ್ ತಿಳಿಸಿದ್ದಾರೆ.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಮಂಡ್ಯ ಜಿಲ್ಲೆಯಲ್ಲಿರುವ ಸಮಸ್ಯೆಗಳ ಕುರಿತು ಪತ್ರದ ಮೂಲಕ ವಿವರಿಸಿದ್ದೇನೆ. ಅಧಿವೇಶನದಲ್ಲಿ ಇಲ್ಲಸಲ್ಲದ ಚರ್ಚೆಗಳೆ ನಡೆಯುತ್ತವೆ. ಹೀಗಾಗಿ ಸುವರ್ಣಸೌಧದಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಭಾಗಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಎಲ್ಲ ಪಕ್ಷದಲ್ಲಿಯೂ ನನ್ನ ಸ್ನೇಹಿತರಿದ್ದಾರೆ. ಜೆಡಿಎಸ್ ಪಕ್ಷ ಸೇರುವ ಕುರಿತು ನಾನು ಮಾತನಾಡುವುದಿಲ್ಲ. ಈ ಕುರಿತು ಮುಂದಿನ ದಿನಗಳಲ್ಲಿ ನಿರ್ಧರಿಸುತ್ತೇನೆ ಎಂದು ತಮ್ಮ ಮುಂದಿನ ರಾಜಕೀಯ ನಡೆಯ ಕುರಿತು ಗೌಪ್ಯತೆ ಕಾಯ್ದುಕೊಂಡರು.
ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಮಂಡ್ಯ ಜಿಲ್ಲೆಯಲ್ಲಿ ಆಕ್ರೋಶ ಭುಗಿಲೆದ್ದ ಸಮಯದಲ್ಲಿಯೂ ಸಹ ಮಾಜಿ ಸಚಿವ ಅಂಬರೀಶ್ ಯಾವುದೇ ಸಭೆಯಲ್ಲಿ ಪಾಲ್ಗೊಂಡಿರಲಿಲ್ಲ. ಇದೀಗ ಚಳಿಗಾಲದ ಅಧಿವೇಶನದಲ್ಲಿಯೂ ಭಾಗಿಯಾಗುವುದಿಲ್ಲ ಎಂದು ತಿಳಿಸಿರುವುದರಿಂದ ಅವರು ಸಹ ಕಾಂಗ್ರೆಸ್ ಪಕ್ಷಕ್ಕೆ ಗುಡ್‌ಬೈ ಹೇಳುತ್ತಾರಾ ಎಂದು ಕಾದು ನೋಡಬೇಕಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ