ಅಶೋಕ್ ದಾಖಲೆ ನೀಡಿದರೆ ತನಿಖೆಗೆ ಅನುಕೂಲ: ರಾಮಲಿಂಗಾರೆಡ್ಡಿ
ಶುಕ್ರವಾರ, 22 ಸೆಪ್ಟಂಬರ್ 2017 (16:36 IST)
ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ಕೇಳಿ ಬಂದಿರುವ ಫೋನ್ ಟ್ಯಾಪಿಂಗ್ ಆರೋಪಕ್ಕೆ ಸಂಬಂಧಿಸಿದಂತೆ ಈ ಬಗ್ಗೆ ಬಿಜೆಪಿಯವರು ದಾಖಲೆ ನೀಡಲಿ ಎಂದು ಗೃಹಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ವಿಕಾಸಸೌಧದಲ್ಲಿ ಮಾತನಾಡಿದ ಅವರು, ಆರ್.ಅಶೋಕ್ ಗೃಹ ಸಚಿವರಾಗಿದ್ದವರು. ಅವರು ದಾಖಲೆ ನೀಡಿದರೆ ಇನ್ನೂ ಅನುಕೂಲವಾಗಲಿದೆ. ದಾಖಲೆ ನೀಡಿದ ಬಳಿಕ ಮುಂದೇನು ಮಾಡಬೇಕೆಂದು ನಿರ್ಧರಿಸುತ್ತೇವೆ. ಅಕ್ರಮ ಡಿನೋಟಿಫಿಕೇಷನ್ ಪ್ರಕರಣದಲ್ಲಿ ಬಿ.ಎಸ್.ಯಡಿಯೂರಪ್ಪ ವಿರುದ್ಧದ ತನಿಖೆಗೆ ಹೈಕೋರ್ಟ್ ನಲ್ಲಿ ಮಧ್ಯಂತರ ತಡೆ ಸಿಗುವುದು ಸಹಜ. ಹಾಗೆಂದ ಮಾತ್ರಕ್ಕೆ ತಪ್ಪು ನಡೆದಿಲ್ಲ ಅಂತ ಅರ್ಥವಲ್ಲ ತಡೆಯಾಜ್ಞೆ ಮತ್ತೆ ತೆರವು ಆಗಬಹುದು ಎಂದರು.
ಕೇಂದ್ರದಿಂದ ರೈತರಿಗೆ ಖಾಲಿ ಕಪ್
ಮಹದಾಯಿ ನದಿ ವಿವಾದ ವಿಚಾರದಲ್ಲಿ ಬಿಜೆಪಿಯನ್ನು ನಾವು ಸಿರೀಯಸ್ ಆಗಿ ತೆಗೆದುಕೊಂಡಿಲ್ಲ. ಗೋವಾ, ಮಹಾರಾಷ್ಟ್ರಗಳಿಗೆ ಬಿಜೆಪಿ ನಾಯಕರ ನಿಯೋಗ ಇನ್ನೂ ಹೋಗಿಲ್ಲ. ಹೀಗಾದರೆ ಜನರಿಗೆ ಬಿಜೆಪಿ ಮೇಲೆ ವಿಶ್ವಾಸ ಹೋಗಿ ಬಿಡುತ್ತದೆ. ಸರ್ಕಾರದ ಸಾಲ ಮನ್ನಾ ಲಾಲಿ ಪಪ್ ಎಂದು ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ. ಆದರೆ ಕೇಂದ್ರ ಸರ್ಕಾರ ಆ ಲಾಲಿ ಪಪ್ಪನ್ನು ಇನ್ನೂ ಕೊಟ್ಟಿಲ್ಲ. ರಾಜ್ಯ ಸರ್ಕಾರ ಲಾಲಿಪಪ್ ನೀಡಿದ್ದು, ಕೇಂದ್ರ ಸರ್ಕಾರ ರೈತರ ಕೈಗೆ ಖಾಲಿ ಕಪ್ ಕೊಟ್ಟಿದೆ ಎಂದು ವ್ಯಂಗ್ಯವಾಡಿದರು.
ಬಿಜೆಪಿ ನಮಗೆ ಸೀರಿಯಸ್ ಅಲ್ಲ
ಚುನಾವಣೆಯಲ್ಲೂ ಬಿಜೆಪಿ ನಮಗೆ ಸಿರೀಯಸ್ ಅಲ್ಲ. ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ. ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಸ್ವಲ್ಪ ಪ್ರಬಲವಾಗಿದೆ. ಸಿಎಂ ಮತ್ತು ಪಕ್ಷದ ಅಧ್ಯಕ್ಷರ ಆದೇಶದಂತೆ ಕುಮಾರಸ್ವಾಮಿ ಭೇಟಿ ಮಾಡಿ ಚರ್ಚೆ ಮಾಡಿದ್ದೇವೆ. 4 ಸ್ಥಾಯಿ ಸಮಿತಿಗಳನ್ನು ಜೆಡಿಎಸ್ ಕೇಳಿದೆ. ಮೇಯರ್, ಉಪಮೇಯರ್ ಆಯ್ಕೆ ಸಂಬಂಧ ಕಾಂಗ್ರೆಸ್ ಮೇಯರ್ ಮತ್ತು ಜೆಡಿಎಸ್ ಉಪಮೇಯರ್ ಅಂತ ಫಿಕ್ಸ್ ಆಗಿದೆ. ಸಂಸದ ಡಿ.ಕೆ ಸುರೇಶ್ ಮಾತನಾಡಿರುವುದನ್ನು ಪಕ್ಷದ ಅಧ್ಯಕ್ಷರ ಗಮನಕ್ಕೆ ತರುತ್ತೇನೆ. ನನ್ನಲ್ಲೇ ಮೇಯರ್ ಹುದ್ದೆಗೆ ನಾಲ್ವರು ಆಕಾಂಕ್ಷಿಗಳಿದ್ದಾರೆ. ಸಿಎಂ, ಪಕ್ಷದ ಅಧ್ಯಕ್ಷರು, ಸಚಿವರು, ಶಾಸಕರು ಕೂತು ಚರ್ಚಿಸಿ ಮೇಯರ್ ಯಾರೆಂದು ಅಂತಿಮಗೊಳಿಸಲಿದ್ದಾರೆ ಎಂದರು.
ಮಗಳು ರಾಜಕೀಯಕ್ಕೆ ಬರುವುದು ಇಷ್ಟವಿಲ್ಲ
ನನ್ನ ಮಗಳು ಜಯನಗರದಿಂದ ಟಿಕೆಟ್ ಕೇಳಿದ್ದಾಳೆ. ರಾಜಕೀಯಕ್ಕೆ ಬರುವುದು ಬೇಡ ಅಂತ ಮಗಳಿಗೆ ಹೇಳಿದ್ದೆ. ಆದರೆ ಅವಳಿಗೆ ಮೊದಲಿಂದಲೂ ರಾಜಕೀಯದಲ್ಲಿ ಆಸಕ್ತಿಯಿದೆ. ಹೈಕಮಾಂಡ್ ಬೇಡ ಅಂದ್ರೆ ಬೇಡ ಎಂದಿದ್ದಾರೆ.
ತನಿಖೆ ಗಡುವು ನೀಡಿಲ್ಲ
ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ಪ್ರಗತಿಯಲ್ಲಿದೆ. ಎಸ್ಐಟಿಯವರು ಸಾಕ್ಷ್ಯಗಳ ಸಂಗ್ರಹದಲ್ಲಿ ತೊಡಗಿದ್ದಾರೆ. ಈ ಹಂತದಲ್ಲಿ ನಾನು ಏನೂ ಹೇಳುವುದು ಸರಿಯಾಗಲ್ಲ. ತನಿಖೆಗೆ ಗಡುವು ನೀಡಿಲ್ಲ. ಆದಷ್ಟು ಬೇಗ ತನಿಖೆ ಪೂರ್ಣವಾಗಲಿದೆ. ಕೆಲವರು ನಕ್ಸಲರು ಅಂತಿದ್ದಾರೆ. ಇನ್ನೂ ಕೆಲವರು ಬಲಪಂಥೀಯರ ಮೇಲೆ ಆರೋಪ ಮಾಡುತ್ತಿದ್ದಾರೆ. ಆದಷ್ಟು ಶೀಘ್ರವಾಗಿ ಆರೋಪಿಗಳನ್ನು ಬಂಧಿಸುತ್ತೇವೆ. ಎಸ್ಐಟಿ ತಂಡ ಯಾರ, ಯಾವ ಪ್ರತಿಕ್ರಿಯೆಗೂ ತಲೆ ಕೆಡಿಸಿಕೊಳ್ಳಲ್ಲ. ಅವರ ಪಾಡಿಗೆ ಅವರು ತನಿಖೆ ಮುಂದುವರಿಸಿದ್ದಾರೆ ಎಂದರು.