ಮೈಸೂರು: ಕರ್ನಾಟಕ ರಾಜ್ಯದಲ್ಲಿ ಲೋಕಸಭೆ ಚುನಾವಣೆ ನಾಮಪತ್ರ ಸಲ್ಲಿಕೆ ಭರಾಟೆ ಜೋರಾಗಿದ್ದು ಗೆಲುವಿಗಾಗಿ ಹೊಸ ಹೊಸ ತಂತ್ರಗಳನ್ನು ರೂಪಿಸುತ್ತಿದ್ದಾರೆ.
ಮೈಸೂರು-ಕೊಡಗು ಹಾಗೂ ಚಾಮರಾಜನಗರ ಲೋಕಸಭಾ ಕ್ಷೇತ್ರ ಗೆಲ್ಲಲು ಪಣ ತೊಟ್ಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು , ತಾವು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಯಬೇಕು ಎಂದರೆ ಈ ಚುನಾವಣೆಯಲ್ಲಿ ನನಗಿಂತ ಹೆಚ್ಚು ಲೀಡ್ ಕೊಟ್ಟು ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಬೇಕೆಂದು ಹೇಳಿಕೊಂಡರು.
ಇಂದು ಬಿಳಿಗೆರೆಯಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ ಅವರು, ವರುಣಾ ನನ್ನ ಪಾಲಿಗೆ ಅದೃಷ್ಟದ ಕ್ಷೇತ್ರ. ನಿಮ್ಮಿಂದ ಎರಡು ಬಾರಿ ಮುಖ್ಯಮಂತ್ರಿಯಾದೆ. ಈ ಚುನಾವಣೆಯಲ್ಲೂ ಕಾಂಗ್ರೆಸ್ ಅಭ್ಯರ್ಥಿಗೆ ಹೆಚ್ಚು ಮತಗಳನ್ನು ನೀಡಿ ಗೆಲ್ಲಿಸಬೇಕೆಂದು ಭಾವನಾತ್ಮಕ ಮಾತುಗಳನ್ನಾಡಿ ಮತಯಾಚಿದರು.
ಮೈಸೂರು- ಕೊಡಗು ಕ್ಷೇತ್ರದಲ್ಲಿ ಬಿಜೆಪಿಯಿಂದ ರಾಜವಂಶಸ್ಥ ಯದುವೀರ ಕೃಷ್ಣದತ್ತ ಒಡೆಯರ್ ಹಾಗೂ ಕಾಂಗ್ರೆಸ್‌ನಿಂದ ಅಭ್ಯರ್ಥಿ ಎಂ.ಲಕ್ಷ್ಮಣ್ ಕಣದಲ್ಲಿದ್ದಾರೆ. ಇಂದು ಯದುವೀರ ಅವರು ನಾಮಪತ್ರ ಸಲ್ಲಿಕೆ ಮಾಡಿದ್ದು, ತಮ್ಮ ಆಸ್ತಿಯ ವಿವರವನ್ನು ನೀಡಿದರು.
ಮೈಸೂರು ಮತ್ತು ಚಾಮರಾಜನಗರ ಲೋಕಸಭಾ ಚುನಾವಣೆ ಗೆಲ್ಲಲು ಸಿಎಂ ಸಿದ್ದರಾಮಯ್ಯ ಭರ್ಜರಿ ಪ್ಲಾನ್ ನಡೆಸಲಿದ್ದಾರೆ. ಕಳೆದ ವಾರವಷ್ಟೇ ನಾಲ್ಕು ದಿನ ವಾಸ್ತವ್ಯ ಮಾಡಿ ಅಪರೇಷನ್ ಹಸ್ತ ಸೇರಿ ಚುನಾವಣೆ ತಂತ್ರಗಾರಿಕೆ ಮಾಡಿದ್ದ ಸಿಎಂ ಸಿದ್ದರಾಮಯ್ಯ ಇಂದು ಭರ್ಜರಿ ಚುನಾವಣಾ ಪ್ರಚಾರ ಕೈಗೊಂಡರು.