ನಾನು ಸಿಎಂ ಆಗಿದ್ರೆ ಲಾಕ್ಡೌನ್ ವೇಳೆ 10 ಸಾವಿರ ಕೊಡ್ತಿದ್ದೆ ಸಿದ್ದರಾಮಯ್ಯ
ಸೋಮವಾರ, 16 ಆಗಸ್ಟ್ 2021 (15:46 IST)
ಬೆಂಗಳೂರು(ಆ.16): ನಾನು ಸಿಎಂ ಆಗಿದ್ದರೆ ಲಾಕ್ಡೌನ್ ವೇಳೆ 10ಸಾವಿರ ಕೊಡುತ್ತಿದ್ದೆ. ಯಡಿಯೂರಪ್ಪ ಹಾಗೂ ಅವರ ಮಗ ಲೂಟಿ ಹೊಡೆದರು. ಆದ್ರೆ ಕಣ್ಣೀರಿನಲ್ಲಿ ಕೈತೊಳೆಯುವ ಜನರಿಗೆ ಹಣ ಕೊಡಲಿಲ್ಲ. ಕೆಲಸವಿಲ್ಲದೆ ಪರದಾಡುವ ಜನರಿಗೆ ಸಹಾಯ ಮಾಡಲಿಲ್ಲ ಎಂದು ವಿಜಯನಗರದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಇಂದಿರಾ ಕ್ಯಾಂಟೀನ್ ಮುಚ್ಚಲು ಹೊರಟಿದ್ದಾರೆ. ಅವನ್ಯಾವನೋ ಸಿ.ಟಿ.ರವಿ ಅಂತ ಇದ್ದಾನೆ. ಅವನಿಗೆ ಮನುಷ್ಯತ್ವವೂ ಇಲ್ಲ. ಬಡವರ ಬಗ್ಗೆಯೂ ಗೊತ್ತಿಲ್ಲ ಅನ್ನಪೂರ್ಣೇಶ್ವರಿ ಹೆಸರು ಇಡಬೇಕು ಎನ್ನುತ್ತಾನೆ. ಅವನಿಗೆ ಇತಿಹಾಸದ ಬಗ್ಗೆಯೂ ತಿಳುವಳಿಕೆ ಇಲ್ಲ ಎಂದು ಏಕವಚನದಲ್ಲೇ ಹರಿಹಾಯ್ದರು.
ದುಡ್ಡೇ ಇಲ್ಲ ಈ ಸರ್ಕಾರದಲ್ಲಿ, ಏನಾದ್ರೂ ಒಂದು ಕೆಲಸ ಮಾಡಿದ್ದಾರಾ..? ವಸತಿ ಸಚಿವ ಸೋಮಣ್ಣ ಮನೆನೂ ಕೊಡಲಿಲ್ಲ, ಜಮೀನು ಕೊಡಲಿಲ್ಲ. ಬರೀ ಸುಳ್ಳು, ಸುಳ್ಳು ಬಿಟ್ಟು ಏನನ್ನು ಹೇಳಲ್ಲ. ದಯಮಾಡಿ ಮುಂದಿನ ಚುನಾವಣೆಯಲ್ಲಿ ಇಂತಹವರನ್ನು ಆಯ್ಕೆ ಮಾಡಬೇಡಿ ಎಂದು ಸಿದ್ದರಾಮಯ್ಯ ಜನರಲ್ಲಿ ಮನವಿ ಮಾಡಿದರು.
ರೇಷನ್ ಏನು ಇವರು ಅಪ್ಪನ ಮನೆ ಇಂದ ಕೊಡ್ತಾರೇನ್ರಿ? ಜನರ ದುಡ್ಡು, ಜನರ ದುಡ್ಡಿನಿಂದಲೇ ಕೊಡ್ತಾರೆ ಕೊಡೋಕೆ ಏನ್ ಕಷ್ಟ? ಎಂದು ಕಿಡಿಕಾರಿದರು.
ಅವರದ್ದು ಹಿಂದುತ್ವ, ಆದ್ರೆ ನಮ್ಮದು ಮನುಷ್ಯತ್ವ. ನಾವೆಲ್ಲರೂ ಹಿಂದೂ ಅಲ್ವ, ಅವ್ರು ಮಾತ್ರ ಹಿಂದೂಗಳಾ? ಬಿಜೆಪಿ ಸರ್ಕಾರದಲ್ಲಿ ಒಬ್ಬರಾದ್ರೂ ಅಲ್ಪಸಂಖ್ಯಾತ ಮಿನಿಸ್ಟರ್ ಇದ್ದಾರಾ? ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಅಂತಾರೆ ಮೋದಿ, ಅದೆಲ್ಲಾ ಬರಿ ಮಾತಲ್ಲಿ. ಗ್ಯಾಸ್ ಬೆಲೆ, ಪೆಟ್ರೋಲ್ ಬೆಲೆ ಕೊಡೋಕೆ ಆಗ್ತಾ ಇದೆಯಾ..? ಕೆಲಸ ಇಲ್ಲ ಅಂದ್ರೆ ಪಕೋಡಾ ಮಾರಿ ಅಂತಾರೆ. ಪಕೋಡಾ ಮಾರಲು ಅಡುಗೆ ಎಣ್ಣೆ200 ರೂಪಾಯಿ ಆಗಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಮುಂದುವರೆ ಅವರು, ಬಸವರಾಜ ಬೊಮ್ಮಾಯಿ ಎಷ್ಟು ದಿನ ಅಧಿಕಾರದಲ್ಲಿ ಇರ್ತಾರೋ ಗೊತ್ತಿಲ್ಲ. ನಾವಂತೂ ಸರ್ಕಾರ ಕೆಡವಲು ಹೋಗಲ್ಲ. ಆದ್ರೆ ಅವರೇ ಬಿದ್ದರೆ ನಾವೇನು ಮಾಡಲು ಆಗಲ್ಲ. ಮುಂದಿನ ಬಾರಿ ಕಾಂಗ್ರೆಸ್ಗೆ ಆಶೀರ್ವಾದ ಮಾಡಿ ಎಂದರು.
ಶಾಲೆ ತೆರೆಯುವ ಕುರಿತು ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಶಾಲೆಗಳನ್ನ ಆರಂಭಿಸಲೇಬೇಕು. ಆದರೆ ಪಾಸಿಟಿವಿಟಿ ರೇಟನ್ನ ಗಮನದಲ್ಲಿಡಬೇಕು. ಅದನ್ನು ಆಧರಿಸಿ ಶಾಲೆ ತೆರೆಯಬೇಕು. ಪಾಸಿಟಿವಿಟಿ ರೇಟ್ ಶೇ 1ಕ್ಕಿಂತ ಕಡಿಮೆ ಇದ್ದರೆ ಮಾತ್ರ ಶಾಲೆ ತೆರಯಬೇಕು. ಆತುರಾತುರವಾಗಿ ತೆರಯುವುದು ಬೇಡ. ಪಾಸಿಟಿವಿಟಿ ರೇಟ್ ಶೇ 1ಕ್ಕಿಂತ ಕಡಿಮೆ ಆದ ಮೇಲೆಯೇ ಕಾದು ಶಾಲೆ ತೆರೆಯಲಿ ಎಂದರು