ಶ್ರೀನಿವಾಸ್‌ಪ್ರಸಾದ್‌ ಬಿಜೆಪಿಗೆ ಸೇರಿದ್ರೆ, ಬಂಗಾರಪ್ಪನವರ ಗತಿಯೇ ಆಗುತ್ತದೆ: ದೇವೇಗೌಡ

ಮಂಗಳವಾರ, 1 ನವೆಂಬರ್ 2016 (14:25 IST)
ಮಾಜಿ ಸಚಿವ ಹಿರಿಯ ಮುಖಂಡ ಶ್ರೀನಿವಾಸ್ ಪ್ರಸಾದ್ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎನ್ನುವ ವರದಿಗಳು ಹರಡಿವೆ. ಒಂದು ವೇಳೆ ಅವರು ಬಿಜೆಪಿಗೆ ಸೇರ್ಪಡೆಯಾದ್ರೆ ಬಂಗಾರಪ್ಪ, ರಾಜಶೇಖರ್ ಮೂರ್ತಿಯವರಿಗೆ ಆದ ಗತಿಯೇ ಆಗುತ್ತದೆ ಎಂದು ಮಾಜಿ ಪ್ರಧಾನಿ ದೇವೇಗೌಡ ಹೇಳಿದ್ದಾರೆ.
 
ಹಿಂದೆ ಕಾಂಗ್ರೆಸ್ ಮುಖಂಡರಾಗಿದ್ದ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಮತ್ತು ರಾಜಶೇಖರ್ ಮೂರ್ತಿ ಬಿಜೆಪಿಯ ಸಿದ್ದಾಂತವನ್ನು ನಂಬಿ ಬಿಜೆಪಿಗೆ ಸೇರ್ಪಡೆಯಾದರು. ನಂತರ ಅವರ ಯಾವ ಮಾತಿಗೂ ಪಕ್ಷದ ಬೆಲೆ ಸಿಗಲಿಲ್ಲ ಎಂದರು.
 
ಬಿಜೆಪಿ ಸೇರಿದವರಿಗೆ ಏನಾಗುತ್ತದೆ ಎನ್ನುವುದಕ್ಕೆ ಬಂಗಾರಪ್ಪ ಮತ್ತು ರಾಜಶೇಖರ್ ಮೂರ್ತಿ ಸಾಕ್ಷಿಯಾಗಿದ್ದಾರೆ ಎಂದು ತಿರುಗೇಟು ನೀಡಿದರು. ಬಿಜೆಪಿ ದಲಿತ ಮತ್ತು ಹಿಂದುಳಿದವರ ವಿರೋಧಿಯಾಗಿದೆ. ಅಂತಹ ಪಕ್ಷಕ್ಕೆ ಪ್ರಸಾದ್ ಸೇರ್ಪಡೆಯಾಗುತ್ತಿರುವುದು ವಿಷಾದನೀಯ ಸಂಗತಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
 
ಶ್ರೀನಿವಾಸ್ ಪ್ರಸಾದ್ ನಂಜನಗೂಡು ಉಪ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದಲ್ಲಿ ಜೆಡಿಎಸ್ ಪಕ್ಷ ಅವರಿಗೆ ಬೆಂಬಲ ನೀಡಲಿದೆ. ಇಲ್ಲವಾದಲ್ಲಿ ಅವರ ದಾರಿ ಅವರಿಗೆ ನಮ್ಮ ದಾರಿ ನಮಗೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಕಡ್ಡಿ ಮುರಿದಂತೆ ಹೇಳಿದರು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ