ಬೆಂಗಳೂರು: ಮಹಿಳೆಯರಿಗೆ ನೀಡಿದ ದೌರ್ಜನ್ಯ ಪ್ರಕರಣದಲ್ಲಿ ಎಸ್‌ಐಟಿಗೆ ಬೇಕಾಗಿರುವ ಸಂಸದ ಪ್ರಜ್ವಲ್ ರೇವಣ್ಣ ಅವರು ಪೊಲೀಸರಿಗೆ ಶರಣಾಗಿ, ವಿಚಾರಣೆ ಎದುರಿಸುವಂತೆ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್ ಡಿ ದೇವೇಗೌಡ ಅವರು ತಾಕೀತು ಮಾಡಿದ್ದಾರೆ.
ಈ ಬಗ್ಗೆ ಪತ್ರ ಬರೆದು ಕರೆ ನೀಡಿರುವ ದೇವೇಗೌಡ ಅವರು, ಇದು ನಾನು ಅವನಿಗೆ ನೀಡುತಿರುವ ಎಚ್ಚರಿಕೆಯಿದು. ಅವನು ಈ ಎಚ್ಚರಿಕೆಗೆ ಮನ್ನಣೆ ಕೊಡದಿದ್ದಲ್ಲಿ ಅವನು ನನ್ನ ಮತ್ತು ಕುಟುಂಬದವರೆಲ್ಲರ ಕೋಪ ಎದುರಿಸಬೇಕಾಗುತ್ತದೆ. ಅವನು ಎಸಗಿದ್ದಾನೆ ಎನ್ನಲಾದ ತಪ್ಪುಗಳನ್ನು ತೀರ್ಮಾನಿಸಲು ಕಾನೂನು ಇದೆ. ತಲೆಬಾಗದಿದ್ದಲ್ಲಿ, ಏಕಾಂಗಿಯಾಗಬೇಕಾಗುತ್ತದೆ. ನನ್ನ ಬಗ್ಗೆ ಗೌರವವಿದ್ದಲ್ಲಿ ಅವನು ಕೂಡಲೆ ಹಿಂದಿರುಗಿ ಬರಬೇಕು ಎಂದು ಹೇಳಿದ್ದಾರೆ.
ನಾನು ಅಥವಾ ನನ್ನ ಕುಟುಂಬ ವಿಚಾರಣೆಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಯಾವುದೇ ಭಾವನೆಗೆ ಸಿಲುಕದೆ, ಅವನು ಎಸಗಿದ್ದಾನೆ ಎನ್ನಲಾದ ಕೃತ್ಯಗಳು ಮತ್ತು ತಪ್ಪುಗಳಿಂದ ನೊಂದಿರುವ, ಅನ್ಯಾಯಕ್ಕೆ ಒಳಗಾಗಿರುವ ಎಲ್ಲರಿಗೂ ನ್ಯಾಯ ಸಿಗಬೇಕು. ಜನರ ವಿಶ್ವಾಸವನ್ನು ಮರಳಿ ಪಡೆಯುವುದಷ್ಟೆ ನನ್ನ ಗುರಿ. ಜನರು ಆರು ದಶಕಗಳ ಕಾಲ ನನ್ನ ರಾಜಕೀಯ ಜೀವನದುದ್ದಕ್ಕೂ ಜತೆಗೆ ನಿಂತಿದ್ದಾರೆ. ಅವರಿಗೆ ನಾನು ಸದಾ ಋಣಿ. ಬದುಕಿರುವವರೆಗೂ ಅವರ ಹಿತದ ವಿರುದ್ಧ ನಡೆದುಕೊಳ್ಳುವುದಿಲ್ಲ ಎಂದಿದ್ದಾರೆ.