ಕಾಂಗ್ರೆಸ್ ನಲ್ಲಿ ಅರೆಭಾಷಿಕ ಗೌಡರ ಕಡೆಗಣನೆ: ಕಿಸಾನ್ ಘಟಕ ಆರೋಪ

ಮಂಗಳವಾರ, 28 ಡಿಸೆಂಬರ್ 2021 (19:43 IST)
ಜಾತ್ಯತೀತ ಪಕ್ಷ ಎನ್ನುವ ಹಣೆಪಟ್ಟಿಯ ಕಾಂಗ್ರೆಸ್’ನಲ್ಲಿ ಹಂತಹಂತವಾಗಿ ಅರೆಭಾಷಿಕ ಗೌಡ ಜನಾಂಗವನ್ನು ಕಡೆಗಣಿಸಲಾಗುತ್ತಿದೆ. ಮಡಿಕೇರಿಯಲ್ಲಿ ನಡೆದ ಪಕ್ಷದ ಸಮಾವೇಶದಲ್ಲಿ ಇದು ಮತ್ತೊಮ್ಮೆ ಸಾಬೀತವಾಗಿದೆ ಎಂದು ನಾಪೋಕ್ಲು ಬ್ಲಾಕ್ ಕಾಂಗ್ರೆಸ್’ನ ಕಿಸಾನ್ ಘಟಕದ ಅಧ್ಯಕ್ಷ ಕೊಡಗನ ತೀರ್ಥಪ್ರಸಾದ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು ಕೊಡಗಿನಲ್ಲಿ ಸುಮಾರು 35ರಿಂದ 40 ಸಾವಿರದಷ್ಟು ಅರೆಭಾಷಿಕ ಜನಾಂಗದ ಮತದಾರರಿದ್ದಾರೆ. ಆದರೆ ಕಾಂಗ್ರೆಸ್‌ನ ಜಿಲ್ಲಾ ಸಮಿತಿ ಹಾಗೂ ರಾಜ್ಯ ಸಮಿತಿಯಲ್ಲಿ ಅರೆಭಾಷಿಕ ಜನಾಂಗದವರಿಗೆ ಯಾವುದೇ ಸ್ಥಾನಮಾನವಿಲ್ಲದಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಕೊಡಗಿಗೆ ಭೇಟಿ ನೀಡಿ ಗ್ರಾಮ ಮತ್ತು ಬೂತ್ ಮಟ್ಟದಿಂದ ಪಕ್ಷವನ್ನು ಬೆಳೆಸುವ ಮಾತುಗಳನ್ನಾಡಿದ್ದಾರೆ. ಆದರೆ ಮಡಿಕೇರಿಯಲ್ಲಿ ನಡೆದ ಕಾರ್ಯಕರ್ತರ ಸಮಾವೇಶದ ವೇದಿಕೆಯಲ್ಲಿ ಸುಮಾರು 50 ಮಂದಿ ಕಾಂಗ್ರೆಸ್ ಮುಖಂಡರು ಅಸೀನರಾಗಿದ್ದರೂ ವೇದಿಕೆಯಲ್ಲಿ ಒಬ್ಬನೇ ಒಬ್ಬ ಅರೆಭಾಷಿಕ ಗೌಡ ಮುಖಂಡನಿಗೆ ಸ್ಥಾನ ನೀಡಿರಲಿಲ್ಲ ಎಂದು ದೂರಿದ್ದಾರೆ.
ಜಾತ್ಯತೀತ ಮನೋಭಾವದ ಬಿ.ಟಿ.ಪ್ರದೀಪ್ ಅವರ ಅಧ್ಯಕ್ಷಾವಧಿಯಲ್ಲಿ ಸಾಕಷ್ಟು ಅರೆಭಾಷಿಕ ಜನಾಂಗದವರು ಪಕ್ಷದೊಂದಿಗೆ ಸಕ್ರಿಯರಾಗಿದ್ದರು. ಆದರೆ ಪ್ರಸ್ತುತ ಕಾಂಗ್ರೆಸ್‌ನಲ್ಲಿ ಜಾತಿ ರಾಜಕಾರಣ ನಡೆಯುತ್ತಿದೆ. ಈ ರೀತಿಯ ತಾರತಮ್ಯ ರಾಜಕಾರಣದಿಂದ ಬೇಸತ್ತು ಹಲವು ಮಂದಿ ಅರೆಭಾಷಿಕ ಗೌಡರು ಕಾಂಗ್ರೆಸ್ ಪಕ್ಷ ತ್ಯಜಿಸಲು ಕಾರಣವಾಗಿದೆ ಎಂದು ತೀರ್ಥಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ.
ಪಕ್ಷ ಸಂಘಟನೆಯಲ್ಲಿ ಯಾವುದೇ ಪಾತ್ರ ವಹಿಸದವರು ಮತ್ತು ಸಕ್ರಿಯರಾಗಿರದವರು ರಾಜ್ಯ ನಾಯಕರು ಬಂದಾಗ ಜೊತೆಯಲ್ಲಿ ನಿಂತು ಪ್ರಚಾರ ಪಡೆಯುತ್ತಿರುವುದು ಅತ್ಯಂತ ಹಾಸ್ಯಾಸ್ಪದ ಬೆಳವಣಿಗೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅರೆಭಾಷಿಕ ಗೌಡರನ್ನು ಹಿಮ್ಮೆಟ್ಟಿಸುವ ಅಥವಾ ತುಳಿಯುವ ಪ್ರಯತ್ನ ಮಾಡುವ ಯಾವುದೇ ಪಕ್ಷಗಳಿಗೆ ರಾಜಕೀಯವಾಗಿ ಹಿನ್ನಡೆಯಾಗುವುದು ಖಚಿತವೆಂದು ಅವರು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ