ವಿಧಾನ ಮಂಡಲದ ನಿರ್ಣಯವೇ ಪ್ರಮುಖ, ನ್ಯಾಯಾಂಗ ನಿಂದನೆಯಾಗಲ್ಲ: ಸಿಎಂ

ಶುಕ್ರವಾರ, 30 ಸೆಪ್ಟಂಬರ್ 2016 (13:01 IST)
ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಪ್ರಜಾಪ್ರಭುತ್ವದಲ್ಲಿ ವಿಧಾನ ಮಂಡಲದ ಸರ್ವಾನುಮತದ ನಿರ್ಣಯ ಪ್ರಮುಖವಾದದ್ದು. ಹೀಗಾಗಿ ನ್ಯಾಯಾಂಗ ನಿಂದನೆಯಾಗಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
 
ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನ ಮಂಡಲದ ವಿಶೇಷ ಅಧಿವೇಶನದಲ್ಲಿ ಕೈಗೊಳ್ಳಲಾದ ಸರ್ವಾನುಮತದ ನಿರ್ಣಯವನ್ನು ನಾವು ಪಾಲಿಸಲೇಬೇಕಾಗುತ್ತದೆ. ಪ್ರಜಾಪ್ರಭುತ್ವದಲ್ಲಿ ವಿಧಾನ ಮಂಡಲದ ಸರ್ವಾನುಮತದ ನಿರ್ಣಯ ಪ್ರಮುಖ. ಹೀಗಾಗಿ ಯಾವುದೇ ನ್ಯಾಯಾಂಗ ನಿಂದನೆಯಾಗಲು ಸಾಧ್ಯವಿಲ್ಲ ಎಂದರು.
 
ಕಾವೇರಿ ವಿವಾದದ ವಿಚಾರಣೆ ಇಂದು ಸುಪ್ರೀಂಕೋರ್ಟ್‌ನಲ್ಲಿ ನಡೆಯಲಿದೆ. ಉಭಯ ರಾಜ್ಯಗಳಿಗೆ ತಜ್ಞರ ಸಮಿತಿ ಕಳುಹಿಸಿ ನೀರಿನ ಲಭ್ಯತೆ ಕುರಿತು ಪರಿಶೀಲನೆ ನಡೆಸಿ ಎಂದು ಕೇಳಿಕೊಳ್ಳಲಾಗುತ್ತದೆ ಎಂದು ಹೇಳಿದರು.
 
ರಾಷ್ಟ್ರಪತಿ ಭೇಟಿ ಇಲ್ಲ........
 
ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಇಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರನ್ನು ಭೇಟಿಯಾಗುತ್ತಿಲ್ಲ. ಇಂದು ಅಂತಹ ಯಾವುದೇ ಕಾರ್ಯಕ್ರಮವೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ