ಸರ್ಕಾರದ ವಿವಿಧ ಇಲಾಖೆಗಳಲ್ಲಿ 1,23,870 ಲಕ್ಷ ಹುದ್ದೆಗಳು ಖಾಲಿ

ಗುರುವಾರ, 1 ಡಿಸೆಂಬರ್ 2016 (07:26 IST)
ಸರ್ಕಾರದ ವಿವಿಧ ಇಲಾಖೆಗಳಲ್ಲಿ ಒಟ್ಟು 1,23,870 ವಿವಿಧ ವರ್ಗಗಳ ಹುದ್ದೆಗಳು ಖಾಲಿಯಿದ್ದು, ಅನುಮತಿ ಪಡೆದ ನಂತರ ಇಲಾಖೆಗಳು ಈ ಖಾಲಿ ಹುದ್ದೆಗಳನ್ನು ಕರ್ನಾಟಕ ಲೋಕಸೇವಾ ಆಯೋಗ ಹಾಗೂ ಇತರೆ ಆಯಕಟ್ಟಿನ ಹುದ್ದೆಗಳಲ್ಲಿ ಆಡಳಿತಾತ್ಮಕ ತೊಂದರೆಗಳ ನಿವಾರಣೆಗಾಗಿ ಪ್ರಭಾರಿ ವ್ಯವಸ್ಥೆಗಳನ್ನು ಮಾಡಿ ಕೆಲಸ ಕುಂಠಿತವಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. 
 
ವಿಧಾನಸಭೆಯಲ್ಲಿಂದು ಶಾಸಕ ಹ್ಯಾರೀಸ್ ಎನ್.ಎ. ಅವರ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಉತ್ತರ ನೀಡಿರುವ ಅವರು ವಿವಿಧ ವರ್ಗಗಳ ಈ ಹುದ್ದೆಗಳ ಪೈಕಿ ಗ್ರೂಪ್ ‘ಎ’ 4891, ಗ್ರೂಪ್ ‘ಬಿ’ 4398, ಗ್ರೂಪ್ ‘ಸಿ’ 81911 ಹಾಗೂ ಗ್ರೂಪ್ ‘ಡಿ’ 32670 ಹುದ್ದೆಗಳು ಸೇರಿದಂತೆ ಒಟ್ಟು 1,23,870 ಹುದ್ದೆಗಳು ಖಾಲಿ ಇದ್ದು, ಈ ಹುದ್ದೆಗಳನ್ನು ಭರ್ತಿ ಮಾಡಲು ಆರ್ಥಿಕ ಇಲಾಖೆಯ ಅನುಮತಿ ಪಡೆದು ನಂತರ ಆಯಾ ಇಲಾಖೆಗಳು ಆ ಖಾಲಿ ಹುದ್ದೆಗಳನ್ನು ಕರ್ನಾಟಕ ಲೋಕಸೇವಾ ಆಯೋಗ ಮತ್ತು ಇತರೆ ಆಯ್ಕೆ ಪ್ರಾಧಿಕಾರಗಳಿಗೆ ಬಿಡುಗಡೆ ಮಾಡುತ್ತಿವೆ. 
 
ಖಾಲಿ ಇರುವ ಹುದ್ದೆಗಳನ್ನು ತುಂಬಲು ಇಲಾಖಾ ಮುಖ್ಯಸ್ಥರುಗಳು ಸಚಿವಾಲಯದ ಆಡಳಿತ ಇಲಾಖೆಗಳಿಗೆ ಪ್ರಸ್ತಾವನೆ ಸಲ್ಲಿಸಿ, ಆಡಳಿತ ಇಲಾಖೆಗಳು ಆರ್ಥಿಕ ಇಲಾಖೆಯ ಸಹಮತಿ ಪಡೆದು ಖಾಲಿ ಹುದ್ದೆಗಳನ್ನು ತುಂಬಬೇಕಾಗುತ್ತದೆ. ಆದರೆ, ಅನುಚ್ಚೇದ 371(ಜೆ) ರಡಿ ಸ್ಥಳೀಯ ವೃಂದದ ಖಾಲಿ ಹುದ್ದೆಗಳನ್ನು ತುಂಬಲು ಮಿತವ್ಯಯ ಆದೇಶ ಅನ್ವಯಿಸುವುದಿಲ್ಲ. ಇದಕ್ಕೆ ಅರ್ಥಿಕ ಇಲಾಖೆಯ ಸಹಮತಿ ನೀಡಿದೆ ಎಂದು ಭಾವಿಸಿ ಮುಂದಿನ ಕ್ರಮಕೈಗೊಳ್ಳಲಾಗುತ್ತಿದೆ.
 
ಸರ್ಕಾರಿ ನೌಕರರಲ್ಲಿ ಕಾರ್ಯದಕ್ಷತೆ, ವೃತ್ತಿ ಕೌಶಲ್ಯ, ನೈಪುಣ್ಯತೆ, ಜನಪರ ಸ್ನೇಹಿ ಕರ್ತವ್ಯ ನಿರ್ವಹಣೆ ಹೆಚ್ಚಿಸಲು ಬಾಕಿ ಇರುವ ಕಡತಗಳನ್ನು ಕಾಲಮಿತಿಯೊಳಗೆ ವಿಲೇವಾರಿ ಮಾಡಲು ಸರ್ಕಾರದ ಮುಖ್ಯ ಕಾರ್ಯದರ್ಶಿಯವರು ಎಲ್ಲ ಇಲಾಖಾ ಮುಖ್ಯಸ್ಥರುಗಳಿಗೆ ಸೂಚನೆಗಳನ್ನು ನೀಡಿ ಕಡತ ವಿಲೇವಾರಿ ಸಪ್ತಾಹ ಮತ್ತು ಇತರೆ ಸ್ಪೆಷಲ್ ಡ್ರೈವ್‍ಗಳನ್ನು ಕೈಗೊಳ್ಳಲಾಗಿದೆ. 
 
ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸಾರ್ವಜನಿಕರಿಗೆ ನೀಡಲಾಗುತ್ತಿರುವ ಸೇವೆಗಳನ್ನು “ಸಕಾಲ” ಯೋಜನೆಯಡಿಯಲ್ಲಿ ತಂದು ಕಾಲಮಿತಿಯೊಳಗೆ ಸೇವೆಗಳು ಲಭ್ಯವಾಗುವಂತೆ ವ್ಯವಸ್ಥೆಗೊಳಿಸಿದೆ. ಸರ್ಕಾರಿ ನೌಕರರು ಕಚೇರಿಗೆ ಹಾಜರಾಗುವ/ ಹೊರಡುವ ಸಮಯವನ್ನು ನಿಯಂತ್ರಣಗೊಳಿಸಲು ಬಯೋಮೆಟ್ರಿಕ್ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಅಧಿಕಾರಿ/ಸಿಬ್ಬಂದಿಗಳಿಗೆ, ಮೈಸೂರು ಆಡಳಿತ ತರಬೇತಿ ಸಂಸ್ಥೆ ಹಾಗೂ ಜಿಲ್ಲಾ ತರಬೇತಿ ಸಂಸ್ಥೆಗಳಲ್ಲಿ ಕಾಲಕಾಲಕ್ಕೆ ತರಬೇತಿ ಶಿಬಿರಗಳನ್ನು ನಡೆಸಿ ಅವರುಗಳ ಕಾರ್ಯದಕ್ಷತೆ ಉತ್ತಮಪಡಿಸಲು ಕ್ರಮವಹಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ