ಸ್ವಾತಂತ್ರ್ಯ ದಿನಾಚರಣೆ ಹಗುರವಾಗಿ ತಿಳಿದ ಅಧಿಕಾರಿಗಳಿಗೆ ಶಾಕ್ ನೀಡಿದ ಡಿಸಿ
ಸ್ವಾತಂತ್ರ್ಯ ದಿನಾಚರಣೆಯನ್ನು ಅಚ್ಟುಕಟ್ಟಾಗಿ ಹಾಗೂ ಸಂಭ್ರಮದಿಂದ ಆಚರಿಸಲು ಅನುಕೂಲವಾಗುವ ಹಾಗೆ ಪೂರ್ವಭಾವಿ ಸಿದ್ಧತೆಗಳನ್ನು ಕೈಗೊಳ್ಳಲು ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ಕರೆಯಲಾಗುತ್ತದೆ. ಆದರೆ ಅಧಿಕಾರಿಗಳು ಸಭೆಗೆ ಬರದಿದ್ದರೆ ಹೇಗಾಗಬೇಡ? ಹೀಗಾಗಿ ಅಧಿಕಾರಿಗಳ ಗೈರುಹಾಜರಿಗೆ ಅಸಮಧಾನಗೊಂಡ ಜಿಲ್ಲಾಧಿಕಾರಿಯು ಅಧಿಕಾರಿಗಳ ವಿರುದ್ಧ ಛಾಟಿ ಬೀಸಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆಯನ್ನು ಹಗುರವಾಗಿ ತಿಳಿದು ಪೂರ್ವಭಾವಿ ಸಿದ್ಧತಾ ಸಭೆಗೆ ಗೈರು ಹಾಜರಾದ 22 ಅಧಿಕಾರಿಗಳಿಗೆ ನೋಟೀಸು ಜಾರಿ ಮಾಡುವಂತೆ ಕಲಬುರಗಿ ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸ್ವಾತಂತ್ರ್ಯ ದಿನಾಚರಣೆಯ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ಭಾರತ ದೇಶಕ್ಕೆ ಆಗಸ್ಟ್ 15ರಂದು ಸ್ವಾತಂತ್ರ್ಯ ದೊರೆತಿದೆ. ಸ್ವಾತಂತ್ರ್ಯ ದೊರೆತಿರುವುದರಿಂದಲೇ ಎಲ್ಲರೂ ತಮ್ಮ ಇಷ್ಟದಂತೆ ಹಾಗೂ ಗೌರವಯುತವಾಗಿ ಬದುಕುವಂತಾಗಿದೆ. ಸ್ವಾತಂತ್ರ್ಯ ದಿನಾಚರಣೆಯನ್ನು ಸರ್ಕಾರಿ ಅಧಿಕಾರಿಗಳು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು ಎಂದರು.
ಪೂರ್ವಭಾವಿ ಸಿದ್ಧತಾ ಸಭೆಗೆ ಗೈರು ಹಾಜರಾದ ಅಧಿಕಾರಿಗಳು ಯಾವುದೇ ಅನುಮತಿ ಪಡೆದಿಲ್ಲ. ಅವರಿಗೆ ನೋಟೀಸು ಜಾರಿ ಮಾಡುವುದಲ್ಲದೇ ರವಿವಾರದಂದು ಬೆಳಿಗ್ಗೆ 10.30 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಹಮ್ಮಿಕೊಂಡಿರುವ ಗೈರು ಹಾಜರಾದ ಅಧಿಕಾರಿಗಳ ಸಭೆಗೆ ಕಡ್ಡಾಯವಾಗಿ ಹಾಜರಾಗುವಂತೆ ಸೂಚಿಸಬೇಕು ಎಂದು ಖಡಕ್ ಎಚ್ಚರಿಕೆ ನೀಡಿದರು.