ಬಡತನ ನಿರ್ಮೂಲನೆ ಮಾಡಿದ್ದು ಇಂದಿರಾ ಗಾಂಧಿ, ಬಿಜೆಪಿಯವರು ಏನು ಮಾಡಿದ್ದಾರೆ: ಸಿದ್ದರಾಮಯ್ಯ

Sampriya

ಗುರುವಾರ, 7 ನವೆಂಬರ್ 2024 (17:05 IST)
ಸಂಡೂರು: ಕೊಟ್ಟ ಮಾತಿನಂತೆ ನಡೆದುಕೊಂಡ, ನುಡಿದಂತೆ ನಡೆದ ಕಾಂಗ್ರೆಸ್ ಮತ್ತು ಕೊಟ್ಟ ಮಾತಿಗೆ ತಪ್ಪಿದ ಬಿಜೆಪಿ ನಡುವೆ ಸಂಡೂರಲ್ಲಿ ಚುನಾವಣೆ ನಡೆಯುತ್ತಿದೆ. ಯಾರಿಗೆ ಮತ ಕೊಟ್ಟರೆ ನಿಮ್ಮ ಮತಕ್ಕೆ ಬೆಲೆ, ಗೌರವ ಬರುತ್ತದೆ ಎಂದು ಯೋಚಿಸಿ ಮತದಾನ ಮಾಡಿ. ಸಂಡೂರಿನಲ್ಲಿ ಅನ್ನಪೂರ್ಣ ಈ.ತುಕಾರಾಮ್ ಅವರು ಗೆದ್ದರೆ ನಾನೇ ಗೆದ್ದ ಹಾಗೆ ಎಂದು ಸಿ.ಎಂ.ಸಿದ್ದರಾಮಯ್ಯ ಹೇಳಿದರು.

ಸಂಡೂರು ವಿಧಾನಸಭಾ ಕ್ಷೇತ್ರದ ಚೋರನೂರು ಗ್ರಾಮದಲ್ಲಿ ನಡೆದ ಬೃಹತ್ ಜನ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದರು. ನಮ್ಮ ಸರ್ಕಾರ ಇನ್ನೂ ಮೂರೂವರೆ ವರ್ಷ ಅಧಿಕಾರದಲ್ಲಿದ್ದು ಮುಂದಿನ ಚುನಾವಣೆಯಲ್ಲೂ ನಮ್ಮ ಕಾಂಗ್ರೆಸ್ ಪಕ್ಷವೇ ಗೆದ್ದು ಅಧಿಕಾರಕ್ಕೆ ಬರಲಿದೆ. ಆದ್ದರಿಂದ ಅನ್ನಪೂರ್ಣಮ್ಮ ಅವರನ್ನು ಅತ್ಯಂತ ಬಹುಮತದಿಂದ ಗೆಲ್ಲಿಸಿ ಸಂಡೂರಿನ ಅಭಿವೃದ್ಧಿ ಪರ್ವ ಮುಂದುವರೆಯಲು ಸಹಕರಿಸಿ ಎಂದು ಮನವಿ ಮಾಡಿದರು.

ಸ್ವಾತಂತ್ರ್ಯ ಹೋರಾಟದಲ್ಲೂ ಭಾಗವಹಿಸದೆ ಸುಮ್ಮನಾಗಿದ್ದ ಬಿಜೆಪಿ ಪರಿವಾರದ ಕೊಡುಗೆ ಈ ದೇಶಕ್ಕೆ ಸೊನ್ನೆ. ಇಂದಿರಾಗಾಂಧಿಯವರು 20 ಅಂಶಗಳ ಕಾರ್ಯಕ್ರಮ ಮೂಲಕ ದೇಶಕ್ಕೆ ಆಹಾರ ಭದ್ರತೆ ಒದಗಿಸಿ, ಬಡತನ ನಿರ್ಮೂಲನೆಗೆ ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೆ ತಂದರು. ಬಿಜೆಪಿಯವರ ಕೊಡುಗೆ ಏನು ಎಂದು ಪ್ರಶ್ನಿಸಿದರು.

ದೇವರಾಜ ಅರಸು ಅವರ ಬಳಿಕ ಐದು ವರ್ಷ ಅವಧಿಗೆ ಮುಖ್ಯಮಂತ್ರಿಯಾಗಿ ಪೂರ್ಣಗೊಳಿಸಿದವನು ನಾನು. ಮತ್ತೆ ಮುಖ್ಯಮಂತ್ರಿ ಆದೆ. ರಾಜ್ಯದ ಜನರಿಗೆ ನಾವು, ನಮ್ಮ‌ ಸರ್ಕಾರ ಕೊಟ್ಟ ಹತ್ತು ಹಲವು ಭಾಗ್ಯಗಳು ಮತ್ತು ನುಡಿದಂತೆ ನಡೆದ ನಮ್ಮ ಜನಪರವಾದ ಬದ್ದತೆ ಇದಕ್ಕೆ ಕಾರಣ.2023 ರಲ್ಲಿ ನಾವು ಐದು ಗ್ಯಾರಂಟಿಗಳನ್ನು ಘೋಷಿಸಿ, ಸರ್ಕಾರ ಬಂದ 8 ತಿಂಗಳಲ್ಲೇ ಐದಕ್ಕೆ ಐದೂ ಜಾರಿ ಮಾಡಿದ್ದೇವೆ. ಬಿಜೆಪಿ ಅಧಿಕಾರದಲ್ಲಿದ್ದ ಅವಧಿಯಲ್ಲಿ ನಿಮಗೆ, ರಾಜ್ಯದ ಜನರಿಗೆ ಬಿಜೆಪಿ ಏನಾದ್ರೂ ಕೊಟ್ಟಿದೆಯಾ? ಕೊಟ್ಟಿದ್ರೆ ನಿಮಗೆ ನೆನಪಿರ್ತಾ ಇತ್ತು ತಾನೆ. ಬಿಜೆಪಿ 2018 ರಲ್ಲಿ ಕೊಟ್ಟಿದ್ದ ಭರವಸೆಗಳಲ್ಲಿ ಶೇ10 ರಷ್ಟನ್ನೂ ಈಡೇರಿಸಲಿಲ್ಲ ಎಂದು ಹೇಳಿದರು.

*ಚುನಾವಣೆ ವೇಳೆಯಲ್ಲಿ ರೈತರ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿದರು. ಆದರೆ, ಗೆದ್ದ ಬಳಿಕ ಸಾಲ ಮನ್ನಾ ಮಾಡಿ ಅಂದ್ರೆ, "ಸಾಲ ಮನ್ನಾ ಮಾಡೋಕೆ ನಾವೇನು ದುಡ್ಡು ಪ್ರಿಂಟ್ ಹಾಕೋ ಮಿಷನ್ ಇದೆಯಾ? ಎಂದು ಯಡಿಯೂರಪ್ಪ ಪ್ರಶ್ನಿಸಿದರು‌. ಸಾಲ ಮನ್ನಾ ಮಾಡದ ಕೇಂದ್ರದ ಬಿಜೆಪಿ ಸರ್ಕಾರದ ಪ್ರಧಾನಿ ಮೋದಿಯವರು ಅತ್ಯಂತ ಶ್ರೀಮಂತರಾದ ಕಾರ್ಪೋರೇಟ್ ಕಂಪನಿಗಳ 16 ಲಕ್ಷ ಕೋಟಿ ಸಾಲ ಮನ್ನಾ ಮಾಡಿದರು. ಇದೇ ಹಣದಲ್ಲಿ ರೈತರ ಸಾಲ ಮನ್ನಾ ಮಾಡಬಹುದಿತ್ತಲ್ಲವಾ ಎಂದು ಪ್ರಶ್ನೆ ಮಾಡಿದರು.

ಅಚ್ಛೇ ದಿನ್ ಆಯೆಗಾ ಅಂದ್ರಲ್ಲಾ ಮೋದಿ ಬಂತಾ ಅಚ್ಛೇ ದಿನ್. ಯಾರ ಮನೆ ಬಾಗಿಲಿಗಾದರೂ ಅಚ್ಛೆ ದಿನ್ ಬಂದಿದೆಯಾ? ಯಾರಿಗಾದರೂ ಕಾಣಿಸಿದೆಯಾ. ಮೋದಿ ಟೀಕಿಸಿದ್ದಕ್ಕೆ ನನ್ನ ಮೇಲೆ ಸುಳ್ಳು ಕೇಸು ಹಾಕಲಾಯಿತು. ನಾನು ನಿರಂತರವಾಗಿ ಮೋದಿ, ಅಮಿತ್ ಶಾ ಅವರ ನೀತಿಗಳನ್ನು, ಸುಳ್ಳುಗಳನ್ನು, ಅವರು ರಾಜ್ಯಕ್ಕೆ ಮಾಡುತ್ತಿರುವ ಅನ್ಯಾಯಗಳನ್ನು ಪ್ರಶ್ನಿಸಿ ಟೀಕಿಸಿದ್ದರಿಂದ ನನ್ನನ್ನೇ ಮುಗಿಸಲು ಮುಂದಾಗಿದ್ದಾರೆ. ನನ್ನ ಮೇಲೆ ಸುಳ್ಳು ಕೇಸು ಹಾಕಿಸಿ ಷಡ್ಯಂತ್ರ ನಡೆಸುತ್ತಿದ್ದಾರೆ ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ