ಮೈಸೂರು ಅತ್ಯಾಚಾರ ಪ್ರಕರಣಕ್ಕೆ ‘ಮಾನಿನಿ’ ಎಂದು ಹೆಸರಿಟ್ಟ ಇಂದ್ರಜಿತ್ ಲಂಕೇಶ್

ಶುಕ್ರವಾರ, 27 ಆಗಸ್ಟ್ 2021 (14:30 IST)
ಮೈಸೂರು(ಆ.27): ಮೈಸೂರಿನಲ್ಲಿ ಯುವತಿ ಮೇಲಿನ ಅತ್ಯಾಚಾರ ಹಾಗೂ ದರೋಡೆ ಪ್ರಕರಣಗಳ ಬಗ್ಗೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಬಹಳ ಬೇಸರ ವ್ಯಕ್ತಪಡಿಸಿದ್ದಾರೆ. ಇಂದು ನಗರದ ಖಾಸಗಿ ಹೋಟೆಲ್ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಮೈಸೂರಿನಲ್ಲಾದ ಅತ್ಯಾಚಾರ ಪ್ರಕರಣಕ್ಕೆ  ಹೊಸ ನಾಮಕರಣ ಮಾಡಿದ್ದಾರೆ. ನಿರ್ಭಯಾ ನಂತರದ ಮೈಸೂರಿನ ಈ ಪ್ರಕರಣಕ್ಕೆ ‘ಮಾನಿನಿ‘ ಎಂದು ಇಂದ್ರಜಿತ್ ಲಂಕೇಶ್ ಹೆಸರಿಟ್ಟಿದ್ದಾರೆ.

ಮೈಸೂರು ನೆಚ್ಚಿನ ತಾಣವಾಗಿತ್ತು. ನನ್ನ ಕೊನೆಯ ಹುಟ್ಟುಹಬ್ಬ ಸಹ ಇಲ್ಲೇ ಆಚರಣೆ ಆಗಿದ್ದು. ಇಂತಹ ಸ್ಥಳ ಹೀಗಾಯ್ತಲ್ಲ ಅಂತಾ ಬೇಜಾರಾಗ್ತಿದೆ. ಘಟನೆ ಬಗ್ಗೆ ಸಂಪೂರ್ಣ ಪೋಲಿಸರನ್ನು ದೂರಲು ಆಗುವುದಿಲ್ಲ. ನಾನು ಒಂದು ತಿಂಗಳ ಹಿಂದೆಯೇ ಆಡಳಿತದ ದೌರ್ಬಲ್ಯದ ಬಗ್ಗೆ ಮಾತನಾಡಿದ್ದೆ. ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಹೇಳಿದ್ದೆ ಎಂದರು.
ಮೈಸೂರು ಒಂದು ಐತಿಹಾಸಿಕ ಹಾಗೂ ಸಾಂಸ್ಕೃತಿಕ ಸ್ಥಳ. ಕುವೆಂಪುರವರ ಹಲವಾರು ಸ್ಪೂರ್ತಿಗಳ ಸ್ಥಳ. ನಮ್ಮ ತಂದೆ ಇಲ್ಲಿ ವಿದ್ಯಾಭ್ಯಾಸ ಸಹ ಮಾಡಿದ್ದರು.  ಇಂತಹ ಇತಿಹಾಸ ಇರುವ ಸ್ಥಳದಲ್ಲಿ ಸ್ಥಿತಿಗಳು ಸಾಗುತ್ತಿರುವ ಬಗ್ಗೆ ಬೇಸರವಾಗುತ್ತಿದೆ. ಇಂತಹ ಪ್ರಕರಣಗಳಿಂದ ಮೈಸೂರು ಡಿಸ್ಟರ್ಬ್ ಆಗಿದೆ ಎಂದು ಬಹಳ ಅಸಮಾಧಾನ ವ್ಯಕ್ತಪಡಿಸಿದರು.
ಮುಂದುವರೆದ ಅವರು, ಡ್ರಗ್ಸ್ ಪ್ರಕರಣ ಕುರಿತಾಗಿಯೂ ಬಹಳ ಬೇಸರ ವ್ಯಕ್ತಪಡಿಸಿದರು.  ಈ ವಿಷಯದಲ್ಲಿ ಸಂಪೂರ್ಣವಾಗಿ ಪೊಲೀಸ್ ಅಧಿಕಾರಿಗಳನ್ನ ಬ್ಲೇಮ್ ಮಾಡಲು ಸಾಧ್ಯವಿಲ್ಲ. ರಾಜಕಾರಣಿಗಳು ಪೊಲೀಸರ ಮೇಲೆ ಒತ್ತಡವೇರುತ್ತಿದ್ದಾರೆ. ಈ ಹಿಂದೆ ಶಿಖಾ ಅವರು ಡಿಸಿ ಆಗಿದ್ದಾಗ ಆಕೆಯ ವಿರುದ್ಧ ರಾಜಕಾರಣಿಗಳು ಹೇಗೆ ವರ್ತನೆ ತೋರಿದ್ದರು ಎಂದು ಗೊತ್ತಿದೆ. ಇಂತಹ ಘಟನೆಗಳು ಹಿರಿಯ ನಾಗರಿಕರನ್ನ ಡಿಸ್ಟರ್ಬ್ ಮಾಡಿದೆ.
ಇಲ್ಲಿನ ಉಸ್ತುವಾರಿ ಮಂತ್ರಿ ಯಾರು? ವಿಪಕ್ಷ ಯಾವುದು? ಆಡಳಿತ ಪಕ್ಷ ಯಾವುದು? ಅಂತಾನೇ ಗೊತ್ತಾಗ್ತಿಲ್ಲ. ಉಸ್ತುವಾರಿ ಸಚಿವರು ಏನು ಮಾಡ್ತಿದಾರೆ? ಅಧಿಕಾರಿಗಳು ಸಚಿವರ ಮಾತು ಕೇಳುತ್ತಿದ್ದರಾ ಎಂಬ ಪ್ರಶ್ನೆ ಎದ್ದಿದೆ. ಇಲ್ಲಿನ ಉಸ್ತುವಾರಿ ಮಂತ್ರಿಗಳು ಯಾವ ರೀತಿ ವರ್ತನೆ ಮಾಡುತ್ತಿದ್ದಾರೆ. ಹೇಗೆ ನಡೆದುಕೊಳ್ಳುತ್ತಿದ್ದಾರೆ..? ಎಂಬುದು ಸಹ ಗೊತ್ತಿದೆ ಎಂದು ಕಿಡಿಕಾರಿದರು.
ಇದೇ ವೇಳೆ ಮೈಸೂರನ್ನ ತಾಲಿಬಾನ್ ಗೆ ಹೋಲಿಸುತ್ತಿರುವುದು ನೋವಿನ ಸಂಗತಿ ಎಂದು ಬೇಸರ ಹೊರಹಾಕಿದರು. ಇನ್ನು ಕೆಲವರು ಮೈಸೂರನ್ನು ಉತ್ತರಪ್ರದೇಶಕ್ಕೆ ಹೋಲಿಸುತ್ತಿದ್ದಾರೆ. ನಿರ್ಭಯಾ ಪ್ರಕರಣ ನಡೆದ ನಂತರ ಕೇಂದ್ರದಿಂದ ಒಂದು ಸಂಸ್ಥೆಯನ್ನು ಸ್ಥಾಪಿಸಲಾಗಿದೆ. ಈ ಸಂಸ್ಥೆಯಿಂದ ನೊಂದವರಿಗೆ ಸರ್ಕಾರವೇ ಹಣ ನೀಡುತ್ತದೆ. ಕರ್ನಾಟಕದಲ್ಲಿ ಅತ್ಯಾಚಾರ ಕೇಸ್ ಸಂಬಂಧ ಸರ್ಕಾರದಿಂದ ಹಣ ಬಂದಿಲ್ಲ. ಈ ಪ್ರಕರಣಕ್ಕೆ ‘ಮಾನಿನಿ‘ ಎಂದು ಹೆಸರುಡುತ್ತೇನೆ ಎಂದು ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ