'ಡಿಸಿಎಂ, ಸಚಿವ ಸ್ಥಾನ ಕೊಡದಿದ್ರೆ ಶಾಸಕನಾಗೇ ಇರ್ತೀನಿ, ಲಾಬಿ ಕೂಡಾ ಮಾಡಲ್ಲ

ಶುಕ್ರವಾರ, 30 ಜುಲೈ 2021 (09:23 IST)
ಶಿವಮೊಗ್ಗ(ಜು.30): ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಂಪುಟ ಸೇರ್ಪಡೆ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಕೈಗೊಂಡಿರುವ ನಿಲುವನ್ನು ನಾನು ತೆಗೆದುಕೊಳ್ಳುವುದಿಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ. ಒಂದು ವೇಳೆ ಪಕ್ಷ ಉಪಮುಖ್ಯಮಂತ್ರಿ, ಸಚಿವ ಸ್ಥಾನ ಕೊಟ್ಟರೆ ನಿಭಾಯಿಸಲು ಸಿದ್ಧ. ಇಲ್ಲವಾದರೆ ಶಾಸಕನಾಗಿ ಪಕ್ಷ ಸಂಘಟಿಸುವೆ ಎಂದು ತಿಳಿಸಿದ್ದಾರೆ.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಸ್ಥಾನದ ವಿಚಾರವಾಗಿ ಪಕ್ಷ ಯಾವುದೇ ತೀರ್ಮಾನ ಕೈಗೊಂಡರೂ ಅದಕ್ಕೆ ಬದ್ಧ ಎಂದು ಹೇಳಿದರು.
ವೈಯಕ್ತಿಕವಾಗಿ ನಾನು ಉಪ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ. ಅನೇಕ ಸಮುದಾಯದ ಮಠಾಧೀಶರು ಕರೆ ಮಾಡಿ ಹೇಳಿದ್ದಾರೆ. ಎಲ್ಲ ಸಮಾಜದ ಪ್ರಮುಖರು ಉಪ ಮುಖ್ಯಮಂತ್ರಿ ಆಗಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಆದರೆ ಪಕ್ಷದಲ್ಲಿ ನನಗಿಂತಲೂ ಹಿರಿಯರು, ಅನುಭವಿಗಳು, ಪ್ರವೀಣರಿದ್ದಾರೆ. ಅವರ ಮಧ್ಯೆ ನಾನು ಬಿಂದು ಅಷ್ಟೇ ಎಂದು ಹೇಳಿದರು.
ನಾನು ಸಂಪುಟದಲ್ಲಿ ಇರಲೇಬೇಕು ಎಂದೇನೂ ಇಲ್ಲ. ಹಾಗಂತ ಸಚಿವ ಸ್ಥಾನಕ್ಕೆ ಯಾವುದೇ ಲಾಬಿ ಮಾಡುವುದೂ ಇಲ್ಲ. ಲಾಬಿ ಎಂದರೆ ನನಗೆ ಗೊತ್ತೇ ಇಲ್ಲ. ಆದರೆ ಶೆಟ್ಟರ್ ಅವರ ರೀತಿ ಸಚಿವ ಸ್ಥಾನ ಬೇಡ ಎನ್ನುವುದಿಲ್ಲ ಎಂದರು.
ಇದೇ ವೇಳೆ ಬಿಜೆಪಿಯಲ್ಲಿದ್ದ ಗೊಂದಲವನ್ನು ಪೂರ್ಣ ಪ್ರಮಾಣದಲ್ಲಿ ನಿವಾರಣೆ ಮಾಡಿಕೊಂಡಿದ್ದೇವೆ. ಮೂರ್ನಾಲ್ಕು ದಿನಗಳಲ್ಲಿ ಆದ ಬೆಳವಣಿಗೆ ಎಲ್ಲರಿಗೂ ಅಚ್ಚರಿಯಾಗಿದೆ. ನಾವೆಲ್ಲರೂ ಸಂತೋಷಪಟ್ಟಿದ್ದೇವೆ. ಬಿಜೆಪಿಯಲ್ಲಿದ್ದ ಗೊಂದಲದಿಂದ ರಾಜಕೀಯ ಲಾಭ ಪಡೆಯಲು ಯೋಚಿಸಿದ್ದ ಕಾಂಗ್ರೆಸ್ಗೆ ನಿರಾಸೆಯಾಗಿದೆ. ಇಷ್ಟುಬೇಗ ಗೊಂದಲ ನಿವಾರಣೆ ಆಯ್ತು ಎಂಬ ಸಂಕಟದಲ್ಲಿ ಕಾಂಗ್ರೆಸ್ನವರು ಇದ್ದಾರೆ. ಮೂರು ದಿನಗಳಲ್ಲೇ ಮುಖ್ಯಮಂತ್ರಿ ಆಯ್ಕೆ ಮಾಡಿ ಗೊಂದಲ ನಿಭಾಯಿಸುವಂಥ ವಿಶೇಷವಾದ ಬೆಳವಣಿಗೆ ಬಿಜೆಪಿಯಲ್ಲಿ ಮಾತ್ರ ಕಾಣಲು ಸಾಧ್ಯ ಎಂದು ಹೇಳಿದರು.
ನಾವೀಗ ಕೃಷ್ಣನ ತಂತ್ರಗಾರಿಕೆ ಬಳಸಿದ್ದೇವೆ: ಈಶ್ವರಪ್ಪ
ಬಿಜೆಪಿಗೆ ಶ್ರೀರಾಮನ ರೀತಿಯ ರಾಜಕಾರಣ ಮಾಡುವುದಕ್ಕೂ ಬರುತ್ತದೆ, ಅನಿವಾರ್ಯವಾದಾಗ ಶ್ರೀಕೃಷ್ಣನ ತಂತ್ರಗಾರಿಕೆ ಹೆಣೆಯಲೂ ಗೊತ್ತು. ಪ್ರಸ್ತುತ ಕೃಷ್ಣನ ತಂತ್ರಗಾರಿಕೆಯನ್ನು ಬಳಸಿದ್ದೇವೆ ಎಂದು ಕೆ.ಎಸ್.ಈಶ್ವರಪ್ಪ ಹೇಳಿದರು.
ಇನ್ನೂ ಎರಡು ವರ್ಷ ರಾಜಕಾರಣ ಮಾಡಿ, ಮುಂದಿನ ಬಾರಿ ನಾವೇ ಅಧಿಕಾರಕ್ಕೆ ಬರಬೇಕು. ಅದಕ್ಕಾಗಿ ಕೃಷ್ಣನ ತಂತ್ರಗಾರಿಕೆಯನ್ನು ಬಳಸಿದ್ದೇವೆ. ಮುಂದೆ ಪೂರ್ಣ ಬಹುಮತ ಬಂದ ನಂತರ ಶ್ರೀರಾಮಚಂದ್ರನ ಆದರ್ಶವನ್ನು ಪರಿಪಾಲನೆ ಮಾಡಿಕೊಂಡು ಆ ದಿಕ್ಕಿನಲ್ಲಿ ರಾಮರಾಜ್ಯದ ಕನಸು ಕಟ್ಟಿಕೊಂಡು ಮುಂದುವರೆಯುತ್ತೇವೆ ಎಂದು ಈಶ್ವರಪ್ಪ ಇದೇ ವೇಳೆ ಹೇಳಿದರು

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ