ಬೆಂಗಳೂರಿನಲ್ಲಿ ಸದ್ಯಕ್ಕೆ ತಪ್ಪಲ್ಲ ಬೀದಿ ನಾಯಿ ಹಾವಳಿ
ಬೆಂಗಳೂರಿನಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಒಂದು ತಿಂಗಳಲ್ಲಿ ಸುಮಾರು 2 ಸಾವಿರ ಜನರು ನಾಯಿ ಕಡಿತಕ್ಕೆ ಒಳಗಾಗಿದ್ದಾರೆ. ಅವರಲ್ಲಿ ಕೆಲವರಿಗೆ ರೇಬಿಸ್ ಲಕ್ಷಣಗಳು ಕೂಡ ಕಂಡುಬಂದಿವೆ. ಹೀಗಾಗಿ, ಬೀದಿ ನಾಯಿಗಳನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕೆಂದು ಬೆಂಗಳೂರಿನ ಜನರು ಒತ್ತಾಯಿಸಿದ್ದರು. ಆದರೆ, ಬೀದಿ ನಾಯಿಗಳನ್ನು ಹಿಡಿದು ಬೆಂಗಳೂರಿನ ಆಶ್ರಯ ಮನೆಗಳಿಗೆ ಸ್ಥಳಾಂತರಿಸಲು ಕರ್ನಾಟಕ ಪಶುಸಂಗೋಪನಾ ಇಲಾಖೆ ನಿರಾಕರಿಸಿದೆ. ಇದಕ್ಕೆ ಸಾರ್ವಜನಿಕರು ಅಸಮಾಧಾನ ಹೊರಹಾಕಿದ್ದಾರೆ. ಪಶುಸಂಗೋಪನಾ ಇಲಾಖೆ ತನ್ನ ಹಿಂದಿನ ಆದೇಶವನ್ನು ಪುನರುಚ್ಛರಿಸಿದ್ದು, ಬೆಂಗಳೂರಿನ ಬೀದಿ ನಾಯಿಗಳು ಬೀದಿಯಲ್ಲಿಯೇ ಉಳಿಯುತ್ತವೆ ಎಂದು ಹೇಳಿದೆ. ಬೆಂಗಳೂರಿನಿಂದ ನಾಯಿಗಳನ್ನು ಸ್ಥಳಾಂತರಿಸದಿರಲು ಬಿಬಿಎಂಪಿ, ಪಶುಸಂಗೋಪನಾ ಇಲಾಖೆ ನಿರ್ಧರಿಸಿದೆ. ಬೀದಿ ನಾಯಿಗಳನ್ನು ಬೇರೆಡೆ ಶಿಫ್ಟ್ ಮಾಡಲು ಬೆಂಗಳೂರಿನ ನಿವಾಸಿಗಳು ಸಾಕಷ್ಟು ದೂರು ನೀಡಿದ್ದರು. ಆದರೂ ಅದಕ್ಕೆ ಬಿಬಿಎಂಪಿ ಒಪ್ಪಿಗೆ ನೀಡಿಲ್ಲ.