ಕೇಂದ್ರ ಸರ್ಕಾರದ ಸಾಧನೆಗಳು ಸಮಾಧಾನ ತಂದಿಲ್ಲ ಅಂತ ನಾನು ಹೇಳಿಲ್ಲ. ಕಪ್ಪು ಹಣ, ಗಂಗಾ ನದಿ ಶುದ್ದೀಕರಣ ಆಗಿಲ್ಲ ಎಂದು ನನಗೆ ಮಾಹಿತಿ ಬಂತು. ಈ ಎರಡು ವಿಷಯಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು ನಿಜ ಎಂದು ಮೈಸೂರಿನಲ್ಲಿ ಪೇಜಾವರ ಶ್ರೀ ವಿಶ್ವೇಶ್ವರ ತೀರ್ಥ ಶ್ರೀಪಾದರು ಹೇಳಿದ್ದಾರೆ.
ಕೇಂದ್ರ ಸರ್ಕಾರ ಐದು ವರ್ಷ ಪೂರೈಸಬೇಕು ಅಂತ ಹೇಳಿದ್ದೆ. ಕೇಂದ್ರ ಸರ್ಕಾರ ಮಾತ್ರವಲ್ಲ, ಈಗಿನ ರಾಜ್ಯ ಸರ್ಕಾರವೂ ಐದು ವರ್ಷ ಪೂರೈಸಲಿ ಎಂಬುದು ನನ್ನ ಅಪೇಕ್ಷೆ. ಯಾವುದೇ ಸರ್ಕಾರ ಇರಲಿ, ಅಧಿಕಾರದ ಪೂರ್ಣ ಅವಧಿ ಆಡಳಿತ ನಡೆಸಬೇಕು. ಪದೇ ಪದೇ ಚುನಾವಣೆ ನಡೆಯಬಾರದು. ಅದರಿಂದ ದುಂದು ವೆಚ್ಚ,ಗಲಾಟೆ, ಗದ್ದಲ ಆಗುತ್ತೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ - ಜೆಡಿಎಸ್ ಪಕ್ಷಗಳು ಸೇರಿ ಸರ್ಕಾರ ರಚಿಸಿವೆ. ಇದಕ್ಕಾಗಿ ರೆಸಾರ್ಟ್ ರಾಜಕಾರಣ ಮಾಡಿವೆ. ಆದ್ರೆ ಈಗಲೂ ಆ ಪಕ್ಷಗಳಿಗೆ ಭಯ ಇದೆ. ರೆಸಾರ್ಟ್ ರಾಜಕಾರಣ ನಿಲ್ಲಬೇಕು. ಹೊರ ದೇಶಗಳಲ್ಲಿ ಸರ್ವ ಪಕ್ಷ ಸರ್ಕಾರಗಳ ರಚನೆಯಾಗಿವೆ. ಅದೇ ರೀತಿ ನಮ್ಮಲ್ಲಿಯೂ ಆಗಬೇಕು. ಚುನಾವಣಾ ಸಂದರ್ಭದಲ್ಲಿ ಅಪ್ಪನಾಣೆ ಅಂತೆಲ್ಲ ಟೀಕೆ ಮಾಡಿಕೊಂಡವರು ಈಗ ಒಟ್ಟಿಗಿದ್ದಾರೆ ಎಂದರು.