ಜಗದೀಶ್ ಶೆಟ್ಟರ್ ಬಳಿಕ ಜನಾರ್ಧನ್ ರೆಡ್ಡಿ ಬಿಜೆಪಿಗೆ ವಾಪಸ್

Krishnaveni K

ಸೋಮವಾರ, 29 ಜನವರಿ 2024 (10:27 IST)
ಬೆಂಗಳೂರು: ವಿಧಾನಸಭೆ ಚುನಾವಣೆ ವೇಳೆ ಮುನಿಸುಕೊಂಡು ದೂರವಾದ ಪ್ರಮುಖ ನಾಯಕರನ್ನು ಮತ್ತೆ ಪಕ್ಷಕ್ಕೆ ಕರೆತರಲು ಬಿಜೆಪಿ ನಾಯಕರು ಪ್ರಯತ್ನ ನಡೆಸಿದ್ದಾರೆ.

ಅದರ ಫಲವಾಗಿ ಈಗಾಗಲೇ ಕಾಂಗ್ರೆಸ್ ಸೇರಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರನ್ನು ಬಿಜೆಪಿಗೆ ಕರೆತರಲಾಗಿದೆ. ಅಮಿತ್ ಶಾ ಸಮ್ಮತಿಯೊಂದಿಗೆ ಜಗದೀಶ್ ಶೆಟ್ಟರ್ ದೆಹಲಿಯಲ್ಲಿ ಬಿಎಸ್ ಯಡಿಯೂರಪ್ಪ ಸಮ್ಮುಖದಲ್ಲಿ ಬಿಜೆಪಿಗೆ ಮರು ಸೇರ್ಪಡೆಯಾಗಿದ್ದರು.

 ಇದರ ಬೆನ್ನ‍ಲ್ಲೇ ಈಗ ಮಾಜಿ ಸಚಿವ ಜನಾರ್ಧನ ರೆಡ್ಡಿಯನ್ನು ಪಕ್ಷಕ್ಕೆ ಕರೆತರಲು ಪ್ರಯತ್ನ ನಡೆದಿದೆ. ಬಳ್ಳಾರಿ ಭಾಗದಲ್ಲಿ ಪಕ್ಷ ಬಲವರ್ಧನೆಗೆ ಜನಾರ್ಧನ ರೆಡ್ಡಿಯನ್ನು ಕರೆತರುವ ಪ್ರಯತ್ನ ನಡೆಯುತ್ತಿದೆ. ಲೋಕಸಭೆ ಚುನಾವಣೆ ವೇಳೆ ಬಳ್ಳಾರಿ ನಾಯಕನನ್ನು ಮರಳಿ ಪಕ್ಷಕ್ಕೆ ಕರೆತರಲು ಬಿಎಸ್ ವೈ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ಮೊನ್ನೆಯಷ್ಟೇ ಜನಾರ್ಧನ ರೆಡ್ಡಿ ಪ್ರಧಾನಿ ಮೋದಿಯವರನ್ನು ಹೊಗಳಿ ಮಾತನಾಡಿದ್ದರು. ಹೀಗಾಗಿ ಅವರು ಮತ್ತೆ ಬಿಜೆಪಿ ಸೇರುವ ಸುಳಿವು ನೀಡಿದ್ದಾರೆ. ವಿಧಾನಸಭೆ ಚುನಾವಣೆ ವೇಳೆ ಜನಾರ್ಧನ ರೆಡ್ಡಿ ಮುನಿಸಿಕೊಂಡು ಬೇರೆ ಪಕ್ಷ ಕಟ್ಟಿಕೊಂಡು ಚುನಾವಣೆ ಎದುರಿಸಿದ್ದರು.

ಇದೀಗ ಲೋಕಸಭೆ ಚುನಾವಣೆ ವೇಳೆ ಬಿಜೆಪಿಗೆ ಸೇರ್ಪಡೆಯಾದರೆ ಬಳ್ಳಾರಿಯಲ್ಲಿ ಮತ್ತೆ ಸೋಮಶೇಖರ ರೆಡ್ಡಿ, ಶ್ರೀರಾಮುಲು ಅವರ ಜೊತೆ ಜನಾರ್ಧನ ರೆಡ್ಡಿ ಪರ್ವ ಶುರುವಾಗಲಿದೆ. ಈ ಬಗ್ಗೆ ಇನ್ನೂ ಅಂತಿಮ ನಿರ್ಧಾರ ಪ್ರಕಟವಾಗಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ