ಜಂತಕಲ್ ಮೈನಿಂಗ್: ಮಾಜಿ ಸಿಎಂ ಕುಮಾರಸ್ವಾಮಿಗೆ ರಿಲೀಫ್

ಗುರುವಾರ, 10 ಆಗಸ್ಟ್ 2017 (13:54 IST)
ಜಂತಕಲ್ ಮೈನಿಂಗ್ ಪ್ರಕರಣ ಕುರಿತಂತೆ ಹೈಕೋರ್ಟ್ ಪೀಠ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ರಿಲೀಫ್ ಒದಗಿಸಿದೆ.
ಹೈಕೋರ್ಟ್‌ನ ಏಕಸದಸ್ಯ ಪೀಠ ಸುಪ್ರೀಂಕೋರ್ಟ್‌ನಲ್ಲಿ ಜಂತಕಲ್ ಮೈನಿಂಗ್ ತನಿಖಾ ವರದಿ ಸಲ್ಲಿಸುವವರೆಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಲಾಗಿದೆ ಎಂದು ಕೋರ್ಟ್ ಮೂಲಗಳು ತಿಳಿಸಿವೆ.
 
ಜಂತಕಲ್ ಮೈನಿಂಗ್ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲು ಬಯಸಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದ್ದರು.
 
ಹೈಕೋರ್ಟ್‌ನ ನ್ಯಾಯಮೂರ್ತಿ ರತ್ನಕಲಾ ಅವರಿದ್ದ ಏಕಸದಸ್ಯ ಪೀಠ, ನಿರೀಕ್ಷಣಾ ಜಾಮೀನು ಮಂಜೂರು ಮಾಡಿ, ಸಾಕ್ಷಿಗಳ ಯಾವುದೇ ರೀತಿಯ ಪ್ರಭಾವ ಬೀರಬಾರದು. ಪ್ರತಿ ಸೋಮುವಾರ ಮತ್ತು ಗುರುವಾರ ಎಸ್‌ಐಟಿ ಕಚೇರಿಗೆ ತೆರಳಿ ಸಹಿ ಮಾಡಬೇಕು. ಎಸ್‌ಐಟಿ ಅಧಿಕಾರಿಗಳು ವಿಚಾರಣೆಗೆ ಕರೆದಾಗ ಹಾಜರಾಗಬೇಕು ಎನ್ನುವ ಷರತ್ತು ವಿಧಿಸಿ ಜಾಮೀನು ಮಂಜೂರು ಮಾಡಿದ್ದಾರೆ. 
 
ಇದೀಗ ವಿಶೇಷ ತನಿಖಾ ತಂಡ ಜಂತಕಲ್ ಮೈನಿಂಗ್ ತನಿಖೆಯನ್ನು ಪೂರ್ಣಗೊಳಿಸಿ ಸುಪ್ರೀಂಕೋರ್ಟ್‌ಗೆ ವರದಿ ಸಲ್ಲಿಸುವವರೆಗೆ ಹೈಕೋರ್ಟ್ ಏಕಸದಸ್ಯ ಪೀಠ ನಿರೀಕ್ಷಣಾ ಜಾಮೀನು ಮಂಜೂರು ಮಾಡಿರುವುದು ಮಾಜಿ ಸಿಎಂ ಕುಮಾರಸ್ವಾಮಿಗೆ ಭಾರಿ ರಿಲೀಫ್ ದೊರೆತಂತಾಗಿದೆ.   

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ