ಜಾರಕಿಹೊಳಿ ಸಿಡಿ ಪ್ರಕರಣ : ವಿಚಾರಣೆ ಮುಂದಕ್ಕೆ

ಬುಧವಾರ, 15 ಸೆಪ್ಟಂಬರ್ 2021 (08:29 IST)
ಬೆಂಗಳೂರು : ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಪ್ರಕರಣದ ವಿಚಾರಣೆಯನ್ನು ಹೈಕೋರ್ಟ್ ಬುಧವಾರಕ್ಕೆ ಮುಂದೂಡಿತು.
Photo Courtesy: Google

ಪ್ರಕರಣದ ತನಿಖೆಗೆ ಎಸ್ಐಟಿ ರಚಿಸಿ ನಗರ ಪೊಲೀಸ್ ಆಯುಕ್ತರ ಹೊರಡಿಸಿದ ಆದೇಶ ಮತ್ತು ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠದ ಮುಂದೆ ಮಂಗಳವಾರ ವಿಚಾರಣೆಗೆ ಬಂದಿದ್ದವು.
ಈ ವೇಳೆ ಯುವತಿ ಪರ ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಹಾಜರಾಗಿ, ಅರ್ಜಿ ವಿಚಾರಣೆಯನ್ನು ಒಂದು ದಿನ ಮುಂದೂಡಬೇಕು ಎಂದು ಮನವಿ ಮಾಡಿದರು.
ಈ ಮಧ್ಯೆ, ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವದಗಿ ವಾದಿಸಿ, ತನಿಖೆ ಆರಂಭವಾದ ಬಳಿಕ ಸಿಆರ್ಪಿಸಿ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಅದರಂತೆ ತನಿಖೆ ಮುಕ್ತಾಯವಾದ ನಂತರ ನ್ಯಾಯಾಲಯಕ್ಕೆ ವರದಿ ಸಲ್ಲಿಸ ಬೇಕಾಗುತ್ತದೆ. ಈಗಾಗಲೇ ಪ್ರಕರಣದ ತನಿಖೆ ಮುಕ್ತಾಯಗೊಂಡಿದೆ. ಆದ್ದರಿಂದ ತನಿಖೆಯ ಅಂತಿಮ ವರದಿಯನ್ನು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಲು ಅನುಮತಿ ನೀಡಬೇಕು ಎಂದು ಕೋರಿದರು.
ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಪ್ರಕರಣ ಕುರಿತ ಎಸ್ಐಟಿ ತನಿಖೆಯನ್ನೇ ಯುವತಿ ಪ್ರಶ್ನೆ ಮಾಡಿದ್ದಾರೆ. ಹೀಗಾಗಿ, ಅವರ ವಾದವೂ ಆಲಿಸಬೇಕಿದೆ ಎಂದು ತಿಳಿಸಿ, ಯುವತಿ ಪರ ವಕೀಲರ ಮನವಿಯಂತೆ ಅರ್ಜಿ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ