ಜೆ.ಸಿ.ರಸ್ತೆಯ ಟ್ರಾಫಿಕ್ ಸಮಸ್ಯೆಗೆ ಬ್ರೇಕ್ ಹಾಕಲು ಮುಂದಾದ ಪಾಲಿಕೆ

ಮಂಗಳವಾರ, 29 ಮಾರ್ಚ್ 2022 (14:25 IST)
ಬೆಂಗಳೂರು: ನಗರದಲ್ಲಿ ಅತ್ಯಂತ ವಾಹನ ದಟ್ಟಣಿ ಇರುವ ಪ್ರಮುಖ ರಸ್ತೆಗಳಲ್ಲಿ ಒಂದಾಗಿರುವ ಜೆ.ಸಿ.ರಸ್ತೆಯಲ್ಲಿ ಟ್ರಾಫಿಕ್ ಸಮಸ್ಯೆ ತಗ್ಗಿಸುವ ನಿಟ್ಟಿನಲ್ಲಿ  ಫ್ಲೈ ಓವರ್ ನಿರ್ಮಾಣ ಮಾಡುವ ಯೋಜನೆಯ ಕುರಿತು 2022-23ನೇ ಸಾಲಿನ ಬಜೆಟ್ ಮೂಲಕ ಸರ್ಕಾರಕ್ಕೆ ಕಳೆದ ಬಾರಿಯಂತೆ ಮತ್ತೊಮ್ಮೆ ವಿಸ್ತೃತ ವರದಿ ಸಿದ್ದಪಡಿಸಿ ಪ್ರಸ್ತಾವನೆ ಸಲ್ಲಿಸಲು ಬಿಬಿಎಂಪಿ ಮುಂದಾಗಿದೆ.
 
ಬಿಬಿಎಂಪಿ ಕೇಂದ್ರ ಭಾಗದಲ್ಲಿರುವ ಪ್ರಮುಖ ರಸ್ತೆಯಾದ ಜೆ.ಸಿ. ರಸ್ತೆಯಲ್ಲಿ ಪ್ರತಿ ಗಂಟೆಗೆ 1 ಲಕ್ಷಕ್ಕೂ ಅಧಿಕ ವಾಹನಗಳು ಸಂಚರಿಸುತ್ತವೆ. ಬೆಳಗ್ಗೆ ಮತ್ತು ಸಂಜೆ ಪ್ರಮಾಣ ಅಧಿಕವಾಗಿರುತ್ತದೆ. ಕೇವಲ 1.5 ಕಿ.ಮೀ ರಸ್ತೆ ಕ್ರಮಿಸಲು ಕನಿಷ್ಠ 20 ನಿಮಿಷ ಸಮಯ ತೆಗೆದುಕೊಳ್ಳುತ್ತದೆ. ಹೀಗಾಗಿ, ಜೆ.ಸಿ.ರಸ್ತೆಯಿಂದ ಕಸ್ತೂರಬಾ ಗಾಂಧಿ ರಸ್ತೆವರೆಗೆ ಒಟ್ಟು 1.7 ಕಿ.ಮೀ ಉದ್ದದ ಉದ್ದದ ಮೇಲ್ಸೇತುವೆ ನಿರ್ಮಾಣಕ್ಕೆ ಬಿಬಿಎಂಪಿ ಯೋಜನೆ ರೂಪಿಸಿದೆ ಎಂದು ತಿಳಿದು ಬಂದಿದೆ.
 
ಈ  ಮೇಲ್ಸೇತುವೆ ನಿರ್ಮಾಣವಾದಲ್ಲಿ ವಾಹನ ಸವಾರರಿಗೆ ಮಿನರ್ವ ವೃತ್ತ, ರವೀಂದ್ರ ಕಲಾಕ್ಷೇತ್ರ, ಪುಟ್ಟಣ್ಣಚೆಟ್ಟಿ ಪುರಭವನ (ಟೌನ್ ಹಾಲ್), ಎಲ್‌ಐಸಿ ಕಚೇರಿ, ಹಲಸೂರು ಗೇಟ್ ಪೊಲೀಸ್ ಠಾಣಿ, ಹಡ್ಸನ್ ವೃತ್ತ ಹಾಗೂ ಕಾರ್ಪೋರೇಷನ್ ವೃತ್ತ ಸೇರಿ ಒಟ್ಟು 7 ಟ್ರಾಫಿಕ್ ಸಿಗ್ನಲ್‌ಗಳು ತಪ್ಪಲಿವೆ. ಕೇವಲ ಎರಡರಿಂದ ಐದು ನಿಮಿಷದಲ್ಲಿ ಮಿನರ್ವ ವೃತ್ತದಿಂದ ಕೆ.ಜಿ. ರಸ್ತೆ ಅಥವಾ ಕಸ್ತೂರಬಾ ಗಾಂಧಿ ರಸ್ತೆಗೆ ತಲುಪಬಹುದು ಎಂದು ಪಾಲಿಕೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ