ದೇವೇಗೌಡರಿಗೆ ಕಾಂಗ್ರೆಸ್ ಕಾರ್ಯಕರ್ತರ ಮುತ್ತಿಗೆ: ಚುನಾವಣಾ ಆಯೋಗಕ್ಕೆ ದೂರು ನೀಡಿದ ಜೆಡಿಎಸ್

Krishnaveni K

ಮಂಗಳವಾರ, 16 ಏಪ್ರಿಲ್ 2024 (14:41 IST)
ತುಮಕೂರು: ತುಮಕೂರಿನ ಕುಂಚಿಟಿಗರ ಭವನದಲ್ಲಿ ನಡೆದ ಬಿಜೆಪಿ-ಜೆಡಿಎಸ್ ಸಮಾವೇಶದ ವೇಳೆ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡರ ಮುಂದೆ ಕಾಂಗ್ರೆಸ್ ಮಹಿಳಾ ಕಾರ್ಯಕರ್ತರು ಪ್ರತಿಭಟನೆ ನಡೆಸಿದ ಘಟನೆ ಕುರಿತಂತೆ ಜೆಡಿಎಸ್ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

ಸಮಾವೇಶಕ್ಕೆ ನುಗ್ಗಿದ ಕಾಂಗ್ರೆಸ್ ಮಹಿಳಾ ಕಾರ್ಯಕರ್ತರು ದೇವೇಗೌಡರ ಮುಂದೆ ಗದ್ದಲವೇರ್ಪಡಿಸಿದ್ದರು. ಇದು ಭದ್ರತಾ ವೈಫಲ್ಯ ಎಂದು ಜೆಡಿಎಸ್ ದೂರಿದೆ. ಜೆಡಿಎಸ್ ಮತ್ತು ಬಿಜೆಪಿ ಜಂಟಿಯಾಗಿ ತುಮಕೂರು ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿಗೆ ದೂರು ಸಲ್ಲಿಸಿದ್ದಾರೆ.

ಸ್ವತಃ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಸಹಕಾರ ಸಚಿವ ಕೆಎನ್ ರಾಜಣ್ಣ ಕುಮ್ಮಕ್ಕಿನಿಂದಾಗಿ ಈ ಗದ್ದಲ ಸೃಷ್ಟಿಸಲಾಗಿದೆ. ಪ್ರಚಾರ ಸಭೆಗೆ ನುಗ್ಗಿ ಗಲಾಟೆ ಮಾಡಿದ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ತಕ್ಕ ಕ್ರಮ ಕೈಗೊಳ್ಳಬೇಕು. ಸ್ಥಳದಲ್ಲಿ ಭದ್ರತೆಗಾಗಿ ನಿಯೋಜನೆಗೊಂಡಿದ್ದ ಪೊಲೀಸರನ್ನು ಅಮಾನತು ಮಾಡಬೇಕು ಎಂದು ದೂರಿನಲ್ಲಿ ಉಭಯ ಪಕ್ಷಗಳು ಆಗ್ರಹಿಸಿವೆ.

ತುಮಕೂರಿನ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ವಿ. ಸೋಮಣ್ಣ ಪರ ಪ್ರಚಾರಕ್ಕೆ ಎಚ್ ಡಿ ದೇವೇಗೌಡರು ಬಂದಿದ್ದರು. ಸಮಾವೇಶ ನಡೆಯುತ್ತಿದ್ದಾಗ ಬಿಜೆಪಿ ಕಾರ್ಯಕರ್ತರ ಸೋಗಿನಲ್ಲಿ ದೇವೇಗೌಡರ ಜೊತೆ ಫೋಟೋ ತೆಗೆಸಿಕೊಳ್ಳುವ ಸೋಗಿನಲ್ಲಿ ಸನಿಹ ಬಂದ ಮಹಿಳೆಯರ ಗುಂಪು ಏಕಾ ಏಕಿ ಘೋಷಣೆ ಕೂಗಲು ಆರಂಭಿಸಿದೆ. ಮಹಿಳೆಯರು ಹಾದಿ ತಪ್ಪುತ್ತಿದ್ದಾರೆ ಎಂಬ ಕುಮಾರಸ್ವಾಮಿ ಹೇಳಿಕೆ ವಿರುದ್ಧ ಘೋಷಣೆ ಕೂಗಲು ಆರಂಭಿಸಿದ್ದಾರೆ.

ತಕ್ಷಣವೇ ಪೊಲೀಸರು ಬಂದು ಅವರನ್ನು ತೆರವುಗೊಳಿಸಲು ಯತ್ನಿಸಿದರು. ಈ ವೇಳೆ ಗೊಂದಲವೇರ್ಪಟ್ಟಿದೆ. ಈ ವೇಳೆ ಬಿಜೆಪಿ ಮಹಿಳಾ ಕಾರ್ಯಕರ್ತೆಯರು ಪ್ರತಿಭಟನೆ ಮಾಡುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತೆಯರನ್ನು ಹೊರಗೆಳೆದು ತಂದರು. ಘಟನೆ ಕುರಿತಂತೆ ಪ್ರತಿಕ್ರಿಯಿಸಿರುವ ವಿ. ಸೋಮಣ್ಣ ಕಾಂಗ್ರೆಸ್ ಸೋಲಿನ ಹತಾಶೆಯಿಂದ ಹೀಗೆ ಮಾಡುತ್ತಿದೆ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ