ಜೆಡಿಎಸ್ ನವರಿಗೆ ಈಗ ಸ್ವಾಭಿಮಾನ ಕಾಡುತ್ತಿದೆ: ಡಿ.ಕೆ. ಶಿವಕುಮಾರ್

ಬುಧವಾರ, 8 ಜೂನ್ 2022 (15:10 IST)
ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸುವಾಗ ಕಾಂಗ್ರೆಸ್ ಪಕ್ಷದ ಜೊತೆ ಚರ್ಚೆ ಮಾಡದ ಜೆಡಿಎಸ್ ಪಕ್ಷಕ್ಕೆ ಈಗ ಸ್ವಾಭಿಮಾನ ಕಾಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ನಮ್ಮಲ್ಲಿ ಸಾಕಷ್ಟು ಭಿನ್ನಾಭಿಪ್ರಾಯಗಳಿದ್ದರೂ ಪಕ್ಷದ ಹಿತದೃಷ್ಟಿಯಿಂದ ನಾವು ಸಾಕಷ್ಟು ಬಾರಿ ಜೆಡಿಎಸ್ ಬೆಂಬಲಕ್ಕೆ ನಿಂತಿದ್ದೇವೆ. ಜಾತ್ಯತೀತ ತತ್ವವನ್ನು ಉಳಿಸಿಕೊಳ್ಳಲು ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಬೇಕು ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ರಣದೀಪ್ ಸುರ್ಜೇವಾಲ ಅವರು ಮನವಿ ಮಾಡಿದ್ದು, ಅದು ಹೈಕಮಾಂಡ್ ತೀರ್ಮಾನವಾಗಿರುತ್ತದೆ. ಹೀಗಾಗಿ ಈ ಬಾರಿಯ ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಜೆಡಿಎಸ್ ಬೆಂಬಲ ನೀಡಲಿ ಎಂದರು.
ಕುಮಾರಸ್ವಾಮಿಯವರು ಮೈತ್ರಿ ಸರ್ಕಾರ ಪತನವಾಗುವ ಸಂದರ್ಭದಲ್ಲಿ ವಿದೇಶಕ್ಕೆ ತೆರಳಿದ ಬಗ್ಗೆ ಹಾಗೂ ಇತರ ವಿಚಾರವಾಗಿ ಸಾಕಷ್ಟು ಮಾತನಾಡಿದ್ದಾರೆ. ಕುಮಾರಸ್ವಾಮಿಯವರು ಏನು ಮಾತನಾಡಿದ್ದಾರೆ, ಸಿಎಂ ಇಬ್ರಾಹಿಂ ಅವರು ಏನೆಲ್ಲಾ ಹೇಳಿದ್ದಾರೆ ಎಂಬುದರ ಮಾಧ್ಯಮಗಳಲ್ಲಿ ದಾಖಲೆಗಳಿವೆ. 37 ಜನ ಶಾಸಕರಿದ್ದರೂ ಕಾಂಗ್ರೆಸ್ ಪಕ್ಷ ಯಾವುದೇ ಷರತ್ತಿಲ್ಲದೆ ಅವರನ್ನು ಮುಖ್ಯಮಂತ್ರಿ ಮಾಡಿತ್ತು. ಆ ಸಂದರ್ಭದಲ್ಲಿ ಏನೆಲ್ಲ ಮಾತುಗಳಾಗಿದ್ದವು ಎಂಬುದು ಶಾಸಕರಿಗೆ ತಿಳಿದಿದೆ. ರಾಜಕೀಯದಲ್ಲಿ ಯಾವುದೂ ಶಾಶ್ವತವಲ್ಲ. ಹೀಗಾಗಿ ಈ ವಿಚಾರವಾಗಿ ನಾನು ವ್ಯಾಖ್ಯಾನ ಮಾಡುವ ಅಗತ್ಯವಿಲ್ಲ ಎಂದು ಅವರು ಹೇಳಿದರು.
ಜೆಡಿಎಸ್ ಪಕ್ಷದಲ್ಲಿ ಕುಮಾರಸ್ವಾಮಿಯವರು ಏನು ಬೇಕಾದರೂ ಮಾತನಾಡಬಹುದು. ಆದರೆ ನಾನು ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿದ್ದರೂ ಪಕ್ಷದ ಮುಖಂಡರ ಜತೆ ಸಮಾಲೋಚನೆ ನಡೆಸಿ ಮಾತಾಡುತ್ತೇನೆ. ಕಾಂಗ್ರೆಸ್ ಪಕ್ಷ ಎಂದರೆ ನಾನೊಬ್ಬ ಮಾತ್ರವಲ್ಲ. ಎಲ್ಲಾ ನಾಯಕರು ಹಾಗೂ ಕಾರ್ಯಕರ್ತರ ಜೊತೆ ಚರ್ಚೆ ಮಾಡಿಯೇ ಎರಡನೇ ಅಭ್ಯರ್ಥಿ ಕಣಕ್ಕಿಳಿಸಲಾಗಿದೆ. ಹೀಗಾಗಿ ಈ ಸಂದರ್ಭದಲ್ಲಿ ನನ್ನ ವೈಯಕ್ತಿಕ ಅಭಿಪ್ರಾಯ ಹಂಚಿಕೊಳ್ಳಲು ಸಾಧ್ಯವಿಲ್ಲ. ನನ್ನ ವೈಯಕ್ತಿಕ ಅಭಿಪ್ರಾಯ ಹೇಳಿ, ರಂಪಾಟ ಮಾಡಿಕೊಂಡು ಚುನಾವಣೆ ನಡೆಸಲು ನಾನು ಸಿದ್ಧನಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ