ಬೆಂಗಳೂರು: ಸಮ್ಮಿಶ್ರ ಸರ್ಕಾರದ ವಿರುದ್ಧ ಬಂಡಾಯವೆದ್ದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಮೂವರು ಜೆಡಿಎಸ್ ಶಾಸಕರ ವಿರುದ್ಧ ಕ್ರಮ ಕೈಗೊಳ್ಳಲು ಸಿಎಂ ಕುಮಾರಸ್ವಾಮಿ ಮತ್ತು ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.
ಎಚ್ ವಿಶ್ವನಾಥ್, ಕೆ ಗೋಪಾಲಯ್ಯ ಮತ್ತು ನಾರಾಯಣ ಗೌಡರ ಶಾಸಕ ಸ್ಥಾನ ರದ್ದುಗೊಳಿಸುವುದು, ಪಕ್ಷದಿಂದ ಉಚ್ಚಾಟನೆ ಮಾಡುವುದು ಇತ್ಯಾದಿ ಖಡಕ್ ಕ್ರಮ ಕೈಗೊಂಡು ಇವರ ರಾಜಕೀಯ ಭವಿಷ್ಯಕ್ಕೆ ಸಂಕಷ್ಟ ತಂದೊಡ್ಡುವ ಸಾಧ್ಯತೆಯಿದೆ. ಈ ಮೂಲಕ ಬಂಡಾಯ ನಾಯಕರಿಗೆ ಖಡಕ್ ಸಂದೇಶ ರವಾನಿಸಲು ಜೆಡಿಎಸ್ ವರಿಷ್ಠರು ಚಿಂತನೆ ನಡೆಸಿದ್ದಾರೆ.
ಇಂದು ಬೆಳಿಗ್ಗೆ ಎಚ್ ಡಿ ದೇವೇಗೌಡ ನಿವಾಸಕ್ಕೆ ತೆರಳಿದ ಸಿಎಂ ಕುಮಾರಸ್ವಾಮಿ ಸುಮಾರು ಒಂದು ಗಂಟೆಗಳ ಕಾಲ ಚರ್ಚೆ ನಡೆಸಿ ಸ್ಪೀಕರ್ ನಡೆ ಮತ್ತು ಮುಂದೆ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಚರ್ಚೆ ನಡೆಸಿದರು ಎನ್ನಲಾಗಿದೆ.