ಬಿಜೆಪಿಯಿಂದ ಕೆ.ಎಸ್.ಈಶ್ವರಪ್ಪ ಕಿಕ್‌ಔಟ್?

ಬುಧವಾರ, 11 ಜನವರಿ 2017 (12:49 IST)
ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ನಲ್ಲಿ ಗುರುತಿಸಿಕೊಂಡಿದ್ದರಿಂದ ಪಕ್ಷದಿಂದ ಅಮಾನತ್ತುಗೊಂಡಿರುವ ಮಾಜಿ ಮೇಯರ್ ವೆಂಕಟೇಶ ಮೂರ್ತಿ ಜೊತೆ ವೇದಿಕೆ ಹಂಚಿಕೊಂಡಲ್ಲಿ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ವಿರುದ್ಧವೂ ಶಿಸ್ತುಕ್ರಮ ಜರುಗಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ. 
 
ಮಾಜಿ ಮೇಯರ್ ವೆಂಕಟೇಶ ಮೂರ್ತಿ ಅಮಾನತ್ತು ನಿರ್ಧಾರ ಎಚ್ಚರಿಕೆಯ ಸಂದೇಶ ಆಗಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಮುಂದಿನ ಗುರಿ ಈಶ್ವರಪ್ಪನವರೇ ಎಂದು ಮೂಲಗಳು ತಿಳಿಸುತ್ತಿವೆ. 
 
ರಾಜ್ಯ ಬಿಜೆಪಿ ಪಾಳಯದಲ್ಲಿ ತಮ್ಮನ್ನು ಕಡೆಗಣಿಸಲಾಗುತ್ತದೆ ಎಂಬ ಕಾರಣಕ್ಕಾಗಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಹೆಸರಿನ ಹೊಸ ಸಂಘಟನೆ ಹುಟ್ಟು ಹಾಕುವ ಮೂಲಕ ಪಕ್ಷದಲ್ಲಿ ತಮ್ಮ ಬಲ ಪ್ರದರ್ಶನ ಮಾಡಲು ಕೆ.ಎಸ್.ಈಶ್ವರಪ್ಪ ಮುಂದಾಗಿದ್ದರು.
 
ಪಕ್ಷದ ವೇದಿಕೆ ಬಿಟ್ಟು ಪ್ರತೇಕ ಸಂಘಟನೆ ಕಟ್ಟುವುದು ಸರಿಯಲ್ಲ. ಹೀಗಾಗಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ಕೈಬಿಡಬೇಕು ರಾಮಲಾಲ್ ಅವರು ಈಶ್ವರಪ್ಪನವರಿಗೆ ತಾಕೀತು ಮಾಡಿದರು.
 
ಯಾವುದೇ ಕಾರಣಕ್ಕೂ ನನ್ನನ್ನು ಬಿಜೆಪಿ ಪಕ್ಷದಿಂದ ಹೊರ ಹಾಕಲ್ಲ. ನನಗೆ ನೋಟಿಸ್ ನೀಡಲು ಸಹ ಯಾರಿಂದಲೂ ಸಾಧ್ಯವಿಲ್ಲ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ನಿನ್ನೆ ನಡೆದ ರಾಯಣ್ಣ ಬ್ರಿಗೇಡ್ ಸಮಾವೇಶದಲ್ಲಿ ಬಹಿರಂಗವಾಗಿ ಸವಾಲ್ ಎಸೆದಿದ್ದರು. 
 
ಈ ಇಬ್ಬರು ನಾಯಕರ ಕಿತ್ತಾಟ ತಾರಕಕ್ಕೇರಿದ್ದು, ಇನ್ನೂ ಮುಂದೆಯೂ ಈಶ್ವರಪ್ಪ ಅವರು ರಾಯಣ್ಣ ಬ್ರಿಗೇಡ್‌ನಲ್ಲಿ ಗುರುತಿಸಿಕೊಂಡರೆ ಅವರನ್ನು ಸಹ ಪಕ್ಷದಿಂದ ಅಮಾನತ್ತು ಮಾಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ