ವೈಜ್ಞಾನಿಕ ಸಾಧನೆಯನ್ನು ಅಪಮಾನಿಸುವ ಮುಖ್ಯಮಂತ್ರಿ ಕ್ಷಮೆ ಕೇಳಲಿ: ಪ್ರಲ್ಹಾದ್ ಜೋಶಿ

Krishnaveni K

ಶುಕ್ರವಾರ, 4 ಜುಲೈ 2025 (20:33 IST)
ಬೆಂಗಳೂರು: ಮುಖ್ಯಮಂತ್ರಿಯವರು ದೇಶದ ವೈಜ್ಞಾನಿಕ ಸಾಧನೆಯನ್ನು ಅಪಮಾನಿಸುವ ಕೆಲಸ ಮಾಡುತ್ತಿರುವುದು ಖಂಡನೀಯ; ಅವರು ಕ್ಷಮೆ ಕೇಳಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಆಗ್ರಹಿಸಿದ್ದಾರೆ.
 
ಇಂದು ಇಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯದ ಆರ್ಥಿಕ ಸ್ಥಿತಿಯನ್ನು ನೋಡಿದರೆ ದುಃಖ ಅನಿಸುತ್ತಿದೆ. ರಾಜಕೀಯ ಗೊಂದಲ, ಅಸ್ಥಿರತೆ, ಭ್ರಷ್ಟಾಚಾರ ಮುಂದುವರೆದಿದೆ; ಈ ಎಲ್ಲವನ್ನೂ ಮರೆಮಾಚಲು ಕೋವಿಡ್ ಲಸಿಕೆಯ ವಿಷಯವನ್ನು ಎತ್ತಿದ್ದಾರೆ; ನನ್ನ ಪ್ರಕಾರ ಕಾಂಗ್ರೆಸ್ ಪಕ್ಷವು ದರಿದ್ರ ಮಾನಸಿಕತೆ ಹೊಂದಿದೆ. 64 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷವು ಒಂದೇ ಒಂದು ಸ್ವದೇಶಿ ಲಸಿಕೆ ಸಂಶೋಧನೆ ಮಾಡಲಿಲ್ಲ; ಯಾವುದೇ ಲಸಿಕೆ ನೀಡಿದರೂ ಅವನ್ನು ಆಮದು ಮಾಡಿಕೊಂಡಿದ್ದರು ಎಂದು ಟೀಕಿಸಿದರು.
 
ನಾವು ಆಂತರಿಕವಾಗಿ ಕೋವಿಡ್ ಲಸಿಕೆಯನ್ನು ದೇಶೀಯವಾಗಿ ಸಂಶೋಧನೆ ಮಾಡಿ ಉತ್ಪಾದಿಸಿದ್ದೇವೆ. ಸುಮಾರು 110ರಿಂದ 120 ಕೋಟಿ ಜನರು ಇದನ್ನು ತೆಗೆದುಕೊಂಡಿದ್ದಾರೆ. 150 ದೇಶಗಳಿಗೂ ಕಳುಹಿಸಿದ್ದೇವೆ ಎಂದು ವಿವರಿಸಿದರು. ಆದರೆ ಈ ಲಸಿಕೆಯನ್ನು ಅವಮಾನ ಮಾಡುವ ಕೆಲಸ ನಡೆದಿದೆ ಎಂದು ಆಕ್ಷೇಪಿಸಿದರು.
 
ಮೋದಿಯವರನ್ನು ವಿರೋಧಿಸುವ ಭರದಲ್ಲಿ ಈ ರೀತಿಯ ಹೇಳಿಕೆ ಕೊಟ್ಟು ದೇಶದ ಸಾಧನೆಯನ್ನು ವಿರೋಧಿಸುತ್ತಿದ್ದಾರೆ. ಕೋವಿಡ್ ಲಸಿಕೆಯನ್ನು ಯಾವುದೇ ಆಧಾರವಿಲ್ಲದೇ ಅಪಮಾನ ಮಾಡುತ್ತಿರುವುದು ಖಂಡನೀಯ ಎಂದರು. ಅನೇಕ ತಜ್ಞರೂ ಈ ರೀತಿ ಆಗಿಲ್ಲ ಎಂದಿದ್ದಾರೆ ಎಂದು ವಿವರಿಸಿದರು.
 
ರಾಜ್ಯದಲ್ಲಿ ಗೊಂದಲ, ಅಸ್ಥಿರತೆ, ಭ್ರಷ್ಟಾಚಾರ ಮುಂದುವರೆದಿದೆ; ಅಲ್ಲದೇ ಯಾವುದೇ ಅಭಿವೃದ್ಧಿ ಕೆಲಸ ಆಗುತ್ತಿಲ್ಲ ಎಂದು ಕಾಂಗ್ರೆಸ್ಸಿನ ಶಾಸಕರೇ ಘಂಟಾಘೋಷವಾಗಿ ಹೇಳುತ್ತಿದ್ದಾರೆ. ದೇಶದಲ್ಲಿ ಅತ್ಯಂತ ಹೆಚ್ಚು ಭ್ರಷ್ಟಾಚಾರ ಕರ್ನಾಟಕದಲ್ಲಿದೆ ಎಂದು ಬಿ.ಆರ್. ಪಾಟೀಲರು ಹೇಳಿದ್ದಾರೆ. ಕೆಲಸ ಮಾಡಿಸಲು ದುಡ್ಡಿಲ್ಲ ಎಂದು ರಾಯರೆಡ್ಡಿಯವರು ಹೇಳಿದರು. ರಾಜು ಕಾಗೆ, ಎನ್.ವೈ.ಗೋಪಾಲಕೃಷ್ಣ, ಪರಮೇಶ್ವರ್ ಅವರೂ ಇದೇ ಧಾಟಿಯಲ್ಲಿ ಮಾತನಾಡಿದ್ದಾರೆ ಎಂದು ವಿವರಿಸಿದರು.
 
ಎಡಪಂಥೀಯ ಚಿಂತನೆ ಜನರಿಂದ ತಿರಸ್ಕಾರ
ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಆರೆಸ್ಸೆಸ್ ನಿಷೇಧಿಸುವ ಕುರಿತ ಪ್ರಿಯಾಂಕ್ ಖರ್ಗೆಯವರ ಹೇಳಿಕೆ ಕುರಿತು ಮಾಧ್ಯಮದವರು ಗಮನ ಸೆಳೆದರು. ಖರ್ಗೆ, ದೊಡ್ಡ ಖರ್ಗೆಯವರ ನಾಯಕರಾದ ರಾಹುಲ್ ಗಾಂಧಿಯವರ ಅಜ್ಜಿ, ಮುತ್ತಾತ ಇವರೆಲ್ಲರೂ ಪ್ರಯತ್ನ ಮಾಡಿ ವಿಫಲವಾದರು. ಆರೆಸ್ಸೆಸ್ ನಿಷೇಧವನ್ನು ಸರಕಾರ ಹಿಂಪಡೆದಿಲ್ಲ. 1975ರಲ್ಲಿ ನಿಷೇಧ ಆಗಿದ್ದಾಗ ಇವರ ಸರಕಾರವೇ ಹೋಯಿತು.
ಅದಕ್ಕಿಂತ ಮೊದಲು ನೆಹರೂ ಅವರು ನಿಷೇಧಿಸಿದ್ದ ಸಂದರ್ಭದಲ್ಲಿ ಈ ಸಂಬಂಧ ಆಯೋಗ ರಚಿಸಿದ್ದು, ಯಾವುದೇ ರೀತಿಯ ಪುರಾವೆ ಇಲ್ಲವೆಂದು ಹೇಳಿದ್ದರಿಂದ ಅದನ್ನು ವಾಪಸ್ ಪಡೆದರು ಎಂದರು.
ಭವಿಷ್ಯದಲ್ಲಿ ಕಾಂಗ್ರೆಸ್ ಪಕ್ಷ ದೇಶದಲ್ಲಿ ಅಧಿಕಾರಕ್ಕೆ ಬರುವುದಿಲ್ಲ; ಅವರು ಹಗಲುಗನಸು ಕಾಣುತ್ತ ಆನಂದ ಪಡುತ್ತಿರಲಿ ಎಂದ ಅವರು, ಆರೆಸ್ಸೆಸ್ ಬೆಳೆಯುತ್ತ ಹೋಗುತ್ತದೆ ಎಂದರು. ನಿಮ್ಮ ಎಡಪಂಥೀಯ ಚಿಂತನೆಯನ್ನು ದೇಶ- ಜಗತ್ತಿನಾದ್ಯಂತ ಜನರು ತಿರಸ್ಕರಿಸಿದ್ದಾರೆ. ವಿಶ್ವ- ದೇಶದ ಜನರು ಬಿಜೆಪಿ ವಿಚಾರಧಾರೆಯನ್ನು ಒಪ್ಪಿಕೊಂಡಿದ್ದಾರೆ. ನೀವೆಂದೂ ಅಧಿಕಾರಕ್ಕೆ ಬರುವುದಿಲ್ಲ; ಚಿಂತೆ ಮಾಡದಿರಿ ಎಂದು ತಿಳಿಸಿದರು.

ಇಂದಿನ ಸಭೆಯಲ್ಲಿ ಸಂಘಟನಾತ್ಮಕ ವಿಷಯಗಳ ಕುರಿತು ಚರ್ಚಿಸಲಾಗಿದೆ ಎಂದು ಪ್ರಶ್ನೆಗೆ ಉತ್ತರ ನೀಡಿದರು. ರವಿಕುಮಾರ್ ಅವರು ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ ಎಂದು ಇನ್ನೊಂದು ಪ್ರಶ್ನೆಗೆ ಉತ್ತರಿಸಿದರು. ಆದರೆ, ಕಾಂಗ್ರೆಸ್ ಪಕ್ಷವು ಈ ಕುರಿತು ಎಫ್.ಐ.ಆರ್ ಮಾಡಿದೆ. ಬಂಧಿಸಿ ಜೈಲಿಗೆ ಹಾಕಬೇಕೆಂದು ಒತ್ತಾಯಿಸುತ್ತಿದ್ದಾರೆ. ಸಂಘದ ಹೆಸರಿನಲ್ಲೂ ಹೇಳಿಕೆ ಕೊಡುತ್ತಿದ್ದಾರೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಒಮ್ಮೆ ಹೆಚ್ಚುವರಿ ಎಸ್ಪಿಗೆ ಹೊಡೆಯಲು ಹೋಗಿದ್ದರು. ಆಗ ಏನಾಗಿತ್ತು ನಿಮಗೆ? ಎಂದು ಕೇಳಿದರು. ವೇದಿಕೆಯಲ್ಲಿ ಒಬ್ಬ ಐಎಎಸ್ ಅಧಿಕಾರಿ ಪಕ್ಕದಲ್ಲಿ ಕುಳಿತಿದ್ದರು. ಅವರನ್ನೂ ಪ್ರಶ್ನಿಸಿ ಅವಮಾನಿಸಿದ್ದರು. ಆಗ ಏನಾಗಿತ್ತು ಎಂದು ಪ್ರಶ್ನಿಸಿದರು. ರವಿಕುಮಾರ್ ಅವರು ತಮ್ಮ ಹೇಳಿಕೆಗೆ ಈಗಾಗಲೇ ಸ್ಪಷ್ಟನೆ ಕೊಟ್ಟಿದ್ದಾರೆ ಎಂದರು.
 
 
 
 
 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ