PSI ಹಗರಣದಲ್ಲಿ ‘ಕೈ’ MLA ಪುತ್ರ, ಸೋದರ?
ಪಿಎಸ್‌ಐ ನೇಮಕಾತಿಯಲ್ಲಿ ನಡೆದಿರುವ ಅಕ್ರಮದ ಆಳಕ್ಕೆ ಹೋದಷ್ಟೂ ಹಲವು ಗಣ್ಯರ ಹೆಸರು ಹೊರಕ್ಕೆ ಬರುತ್ತಿದೆ. ಕೆಲ ದಿನಗಳ ಹಿಂದಷ್ಟೇ ಎಡಿಜಿಪಿ ಅಮೃತ್ ಪೌಲ್ ಅವರು ಈ ಕೇಸ್ನಲ್ಲಿ ಸಿಲುಕಿಕೊಂಡಿದ್ದರು. ಇದೀಗ ಕಾಂಗ್ರೆಸ್ ಶಾಸಕರೊಬ್ಬರ ಮಗ ಹಾಗೂ ಅವರ ಸಹೋದರ ಕೂಡ ಇದರಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಅಫಜಲಪುರದ ಕಾಂಗ್ರೆಸ್ ಶಾಸಕ ಎಂ.ವೈ.ಪಾಟೀಲ್ ಪುತ್ರ ಅರುಣ್ ಪಾಟೀಲ್ ಹಾಗೂ ಶಾಸಕರ ಸಹೋದರ ಎಸ್.ವೈ.ಪಾಟೀಲ್ಗೆ ಸಂಕಷ್ಟ ಎದುರಾಗಿದೆ. ಶಾಸಕ ಎಂ.ವೈ.ಪಾಟೀಲ್ ಅವರ ಗನ್ಮ್ಯಾನ್ ಹಯ್ಯಾಳಿ ದೇಸಾಯಿ ಅವರನ್ನು ಪಿಎಸ್‌ಐ ಮಾಡುವ ಉದ್ದೇಶದಿಂದ ಅಕ್ರಮ ನಡೆದಿರುವ ಶಂಕೆ ಉಂಟಾಗಿದೆ. ಹಯ್ಯಾಳಿ ದೇಸಾಯಿ ಅವರನ್ನು ಪಿಎಸ್‌ಐ ಮಾಡಬೇಕು ಎಂದು ಅರುಣ್ ಅವರು, ಮಂಜುನಾಥ್ ಮೇಳಕುಂದಿಗೆ ಸೂಚನೆ ನೀಡಿದ್ದರು ಎನ್ನಲಾಗಿದೆ. ಈ ಸಂಬಂಧ ಮಾತನಾಡಲು ಮಂಜುನಾಥ್ ಮೇಳಕುಂದಿಗೆ ಕರೆಮಾಡಿದ್ದ ಆರ್.ಡಿ.ಪಾಟೀಲ್ ಅವರು, ಅರುಣ್ ಜತೆ ಮಾತನಾಡುವಂತೆ ಸೂಚಿಸಿರುವುದಾಗಿ ತಿಳಿದು ಬಂದಿದೆ. ಈ ಸೂಚನೆ ಮೇರೆಗೆ ಮಂಜುನಾಥ್ ಮೇಳಕುಂದಿ ಶಾಸಕರ ಪುತ್ರ ಅರುಣ್ ಕುಮಾರ್ಗೆ ಕರೆ ಮಾಡಿ 30 ಲಕ್ಷಕ್ಕೆ ಡೀಲ್ ಕುದುರಿಸಿಕೊಂಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.