ರೈಲ್ವೆ ಟಿಕೆಟ್‌ಗಳಲ್ಲಿ ಕನ್ನಡದ ಹವಾ !!

ಅತಿಥಾ

ಶನಿವಾರ, 3 ಮಾರ್ಚ್ 2018 (16:10 IST)
ಸಾಮಾನ್ಯ ಪ್ರಯಾಣದ (ಜನರಲ್‌ ಟಿಕೆಟ್‌) ರೈಲ್ವೆ ಟಿಕೆಟ್‌ಗಳ ಮೇಲೆ ಕನ್ನಡದಲ್ಲಿ ಮಾಹಿತಿ ನೀಡುವುದಾಗಿ ಕೇಂದ್ರ ರೈಲ್ವೆ ಇಲಾಖೆ ಘೋಷಣೆ ಮಾಡಿದ ಹಲವು ತಿಂಗಳ ಬಳಿಕ ಕನ್ನಡದಲ್ಲಿ ಮುದ್ರಿಸಿದ ಟಿಕೆಟ್‌ಗಳನ್ನು ವಿತರಿಸುತ್ತಿವೆ. ಇಲ್ಲಿನ ನೈಋತ್ಯ ರೈಲ್ವೆಯ ಪ್ರಯಾಣದ ಟಿಕೆಟ್‌ಗಳಲ್ಲಿ ಇನ್ನು ಮುಂದೆ ಇಂಗ್ಲಿಷ್‌ ಹಾಗೂ ಹಿಂದಿಯೊಂದಿಗೆ ಕನ್ನಡ ಭಾಷೆಯೂ ರಾರಾಜಿಸಲಿದೆ.
ಮೈಸೂರು-ಬೆಂಗಳೂರು-ಹುಬ್ಬಳ್ಳಿ ರೈಲ್ವೆ ನಿಲ್ದಾಣಗಳಲ್ಲಿ ಇಂದಿನಿಂದ ಕನ್ನಡದಲ್ಲಿ ರೈಲ್ವೆ ಟಿಕೆಟ್ ವಿತರಿಸಲಾಗಿದೆ. ಸ್ವಯಂ ಚಾಲಿತ ಟಿಕೆಟ್‌ ಮಾರಾಟ ಯಂತ್ರಗಳಿಂದ ಪಡೆಯುವ ಟಿಕೆಟ್‌ಗಳಲ್ಲಿ ಕನ್ನಡ ಭಾಷೆಯಲ್ಲಿ ಊರಿನ ಹೆಸರು ಮುದ್ರಣವಾಗುತ್ತಿದೆ. ಎಟಿವಿಎಂ ಹಾಗೂ ಮೊಬೈಲ್‌ ಟಿಕೆಟಿಂಗ್‌ ಆ್ಯಪ್‌ಗ್ಳ ಮೂಲಕ ಖರೀದಿಸುವ ಟಿಕೆಟ್‌ ಗಳಲ್ಲೂ ಕನ್ನಡ ಭಾಷೆ ಇರಲಿದೆ.
 
ಕೇಂದ್ರ ರೈಲ್ವೆ ಸಚಿವ ಪಿಯೂಷ್‌ ಗೋಯಲ್‌ ಅವರು ಟ್ವೀಟ್‌ ಮೂಲಕ, ''ಕೌಂಟರ್‌ಗಳಲ್ಲಿ ದಟ್ಟಣೆ ತಪ್ಪಿಸಲು ಕರ್ನಾಟಕದ ಹಲವು ರೈಲು ನಿಲ್ದಾಣಗಳಲ್ಲಿ ಮತ್ತಷ್ಟು ಆಟೋಮ್ಯಾಟಿಕ್‌ ಟಿಕೆಟ್‌ ವೆಂಡಿಂಗ್‌ ಮಷೀನ್‌ಗಳನ್ನು ಪರಿಚಯಿಸುತ್ತಿದ್ದೇವೆ. ಅದರ ಜತೆಗೆ ಪ್ರಯಾಣಿಕರ ಅನುಕೂಲಕ್ಕಾಗಿ ಟಿಕೆಟ್‌ಗಳ ಮೇಲೆ ಕನ್ನಡದಲ್ಲಿ ಮುದ್ರಿಸಲಾಗುತ್ತದೆ'' ಎಂದು ಹೇಳಿದ್ದಾರೆ.
 
ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ರೈಲ್ವೆ ನಿಲ್ದಾಣಗಳಲ್ಲಿ ಕನ್ನಡ ಭಾಷೆಯಲ್ಲಿ ಟಿಕೆಟ್ ಮುದ್ರಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ನೈರುತ್ಯ ರೈಲ್ವೆ ತಿಳಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ