ವಿವಾದಕ್ಕೆಡೆ ಮಾಡಿರುವ ಕರ್ನಾಟಕ ಬಂದ್ ದಿನಾಂಕ!

ಮಂಗಳವಾರ, 23 ಜನವರಿ 2018 (09:01 IST)
ಬೆಂಗಳೂರು: ಮಹದಾಯಿ ನದಿ ನೀರಿಗಾಗಿ ಫೆಬ್ರವರಿ 4 ರಂದು ವಿವಿಧ ಸಂಘಟನೆಗಳು ಬಂದ್ ಗೆ ಕರೆ ನೀಡಿರುವುದು ಇದೀಗ ಆಡಳಿತಾರೂಢ ಕಾಂಗ್ರೆಸ್ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ.
 

ಫೆಬ್ರವರಿ 4 ರಂದು ಬಿಜೆಪಿಯ ಕರ್ನಾಟಕ ಪರಿವರ್ತನಾ ರ್ಯಾಲಿಯ ಸಮಾರೋಪ ಸಮಾರಂಭ ಆಯೋಜಿಸಲಾಗಿದ್ದು, ಇದರಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ ಭಾಗಿಯಾಗಲಿದ್ದಾರೆ. ಇದೇ ದಿನ ಬಂದ್ ನಡೆಸಿರುವುದಕ್ಕೆ ಈಗ ಪ್ರತಿಪಕ್ಷ ಬಿಜೆಪಿ ಟೀಕಾಪ್ರಹಾರ ನಡೆಸಿದೆ.

ಪ್ರಧಾನಿ ಕಾರ್ಯಕ್ರಮಕ್ಕೆ ಬೇಕೆಂದೇ ಅಡ್ಡಿಪಡಿಸಲು ಕಾಂಗ್ರೆಸ್ ಕರ್ನಾಟಕ ಬಂದ್ ಗೆ ಬೆಂಬಲ ಸೂಚಿಸಿದೆ ಮತ್ತು ಅದೇ ದಿನ ಬಂದ್ ನಡೆಸಲು ಕುಮ್ಮಕ್ಕು ನೀಡಿದೆ ಎಂಬ ಆರೋಪ ಮಾಡಿದೆ. ಹೀಗಾಗಿ ಇದೀಗ ಸರ್ಕಾರ ಇಕ್ಕಟ್ಟಿಗೆ ಸಿಲುಕಿದೆ. ಅತ್ತ ಪ್ರಧಾನಿ ಕಾರ್ಯಕ್ರಮಕ್ಕೆ ಯಾವುದೇ ತೊಂದರೆಯಿಲ್ಲದಂತೆ ನೋಡಿಕೊಳ್ಳುವ ಅನಿವಾರ್ಯತೆಗೆ ಸರ್ಕಾರ ಸಿಲುಕಿದೆ. ಅಷ್ಟೇ ಅಲ್ಲ, ಬಿಜೆಪಿ ಯಾತ್ರೆಗೆ ತೊಂದರೆ ನೀಡುವುದಕ್ಕಾಗಿಯೇ ಕರ್ನಾಟಕ ಬಂದ್ ಗೆ ಬೆಂಬಲ ನೀಡುತ್ತಿದೆ ಎಂದು ಜನರ ಮನದಲ್ಲಿ ಭಾವನೆ ಮೂಡದಂತೆ ನೋಡಿಕೊಳ್ಳುವ ಅನಿವಾರ್ಯತೆ ಎದುರಾಗಿದೆ.

ಇದೀಗ ಉಭಯ ಪಕ್ಷಗಳ ನಡುವಿನ ಕೆಸರೆರಾಚಟಕ್ಕೆ ನಾಂದಿ ಹಾಡಿದೆ. ಇದೊಂದು ಹೇಸಿಗೆ ರಾಜಕಾರಣ ಎಂದು ಬಿಜೆಪಿ ಆರೋಪಿಸಿದರೆ, ಅತ್ತ ಸಿಎಂ ಸಿದ್ದರಾಮಯ್ಯ, ಹೀಗೊಂದು ಆರೋಪ ಮಾಡುವವರಿಗೆ ಕನಿಷ್ಠ ಸಾಮಾನ್ಯ ಜ್ಞಾನವೂ ಇಲ್ಲ ಎಂದು ತಿರುಗೇಟು ನೀಡಿದ್ದಾರೆ. ಅಂತೂ ಯಾವ ಉದ್ದೇಶಕ್ಕಾಗಿ ಬಂದ್ ಗೆ ಕರೆ ನೀಡಲಾಗಿದೆಯೋ ಅದನ್ನು ಮರೆತು ರಾಜಕೀಯ ಪಕ್ಷಗಳು ತಮ್ಮ ಕೆಸರೆರಾಚಟದಲ್ಲಿ ತೊಡಗಿರುವುದು ಮಾತ್ರ ವಿಪರ್ಯಾಸ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ