ಇಂದು ದೆಹಲಿಯಲ್ಲಿ ನೂತನ ಕರ್ನಾಟಕ ಭವನ ಉದ್ಘಾಟನೆ: ನಿರ್ಮಾಣಕ್ಕೆ ಕೋಟಿ ಕೋಟಿ ಖರ್ಚು

Krishnaveni K

ಬುಧವಾರ, 2 ಏಪ್ರಿಲ್ 2025 (10:36 IST)
Photo Credit: X
ನವದೆಹಲಿ: ಇಂದು ದೆಹಲಿಯಲ್ಲಿ ನೂತನ ಕರ್ನಾಟಕ ಭವನ ಕಟ್ಟಡ ಉದ್ಘಾಟನೆಯಾಗಲಿದೆ. ಈ ಕಟ್ಟಡ ನಿರ್ಮಾಣಕ್ಕೆ ಕೋಟಿ ಕೋಟಿ ಖರ್ಚಾಗಿದೆ. ವಿವರ ಇಲ್ಲಿದೆ ನೋಡಿ.

ದೆಹಲಿಯಲ್ಲಿ ಕರ್ನಾಟಕ ಭವನ ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಇಂದು ಸಂಜೆ 6.30 ಕ್ಕೆ ಈ ಕಟ್ಟಡ ಲೋಕಾರ್ಪಣೆಯಾಗಲಿದೆ. ಸಿಎಂ ಸಿದ್ದರಾಮಯ್ಯ ಭವನ ಉದ್ಘಾಟಿಸಲಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಡಿಸಿಎಂ ಡಿಕೆ ಶಿವಕುಮಾರ್ ಕೂಡಾ ಭಾಗಿಯಾಗಲಿದ್ದಾರೆ. ಇನ್ನು ವಿರೋಧ ಪಕ್ಷದ ನಾಯಕರಾದ ಆರ್ ಅಶೋಕ್ ಮತ್ತು ಛಲವಾದಿ ನಾರಾಯಣಸ್ವಾಮಿಯ, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಪ್ರಹ್ಲಾದ್ ಜೋಶಿ, ವಿ ಸೋಮಣ್ಣಗೂ ಆಹ್ವಾನ ನೀಡಲಾಗಿದೆ.

ಕರ್ನಾಟಕ ಭವನದ ವಿಶೇಷತೆ
ದೆಹಲಿಯಲ್ಲಿ ಭವ್ಯ ಕರ್ನಾಟಕ ಭವನ ಸುಮಾರು 3,532 ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಿಸಲಾಗಿದೆ. ಈ ಭವನವು ಒಟ್ಟು 9 ಅಂತಸ್ತುಗಳನ್ನು ಹೊಂದಿದೆ. ಇದರಲ್ಲಿ ಒಟ್ಟು 52 ಕೊಠಡಿಗಳಿದ್ದು 2 ವಿವಿಐಪಿ ಸೂಟ್ ರೂಂ, 32 ಸೂಟ್ ರೂಂ, 18 ಸಿಂಗಲ್ ರೂಂಗಳನ್ನು ಹೊಂದಿದೆ. 2018 ರಲ್ಲಿ ಯೋಜನೆ ಆರಂಭಗೊಂಡಿತ್ತು. ಮೊದಲು 81 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲು ಯೋಜನೆ ಹಾಕಲಾಗಿತ್ತು. ಅಂತಿಮವಾಗಿ ಈಗ 132 ಕೋಟಿ ರೂ. ವೆಚ್ಚ ತಗುಲಿದೆ.

ದೆಹಲಿಗೆ ಭೇಟಿ ನೀಡುವ ರಾಜಕಾರಣಿಗಳು, ಸರ್ಕಾರೀ ಅಧಿಕಾರಿಗಳು, ಗಣ್ಯರು, ಸಾರ್ವಜನಿಕರಿಗೆ ಇಲ್ಲಿ ಕೊಠಡಿ ವ್ಯವಸ್ಥೆ ಮಾಡಲಾಗುತ್ತದೆ. ಕರ್ನಾಟಕ ಸರ್ಕಾರದಿಂದ ದೆಹಲಿಯಲ್ಲಿ ನಡೆಯುವ ಕಾರ್ಯಕ್ರಮಗಳನ್ನು ಆಯೋಜಿಸಲು ವ್ಯವಸ್ಥೆ ಮಾಡಲಾಗಿದೆ. ಇದನ್ನು ಕರ್ನಾಟಕದ ಪರಂಪರೆ, ಸಂಸ್ಕೃತಿಗೆ ಅನುಗುಣವಾಗಿಯೇ ನಿರ್ಮಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ