ಕರ್ನಾಟಕ ಬಿಜೆಪಿಗೆ ಸೋಲಿಗೆ ಕಾರಣ ಕಾಂಗ್ರೆಸ್-ಜೆಡಿಎಸ್ ಅಲ್ಲ!
ಬುಧವಾರ, 7 ನವೆಂಬರ್ 2018 (08:52 IST)
ಬೆಂಗಳೂರು: ಲೋಕಸಭೆ ಉಪಚುನಾವಣೆಯಲ್ಲಿ ಗೆದ್ದು ಬೀಗುತ್ತಿರುವ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷಗಳು ಇದು ಮುಂಬರುವ ಲೋಕಸಭೆ ಚುನಾವಣೆಗೆ ಟ್ರೇಲರ್ ಎಂದೇ ಅಂದುಕೊಂಡಿವೆ.
ಆದರೆ ಬಿಜೆಪಿ ಸೋಲಿಗೆ ಈ ಎರಡೂ ಪಕ್ಷಗಳು ಕಾರಣವಲ್ಲ ಎನ್ನುವುದು ಈ ಮೈತ್ರಿ ಪಕ್ಷಗಳಿಗೂ ಗೊತ್ತು. ಕರ್ನಾಟಕ ಬಿಜೆಪಿಯಲ್ಲಿ ಒಗ್ಗಟ್ಟಿನ ಕೊರತೆ, ಸಶಕ್ತ ನಾಯಕತ್ವದ ಕೊರತೆ, ಚುನಾವಣೆಯಲ್ಲಿ ಒಗ್ಗೂಡಿ ಹೋರಾಡುವ ಆಸಕ್ತಿ ಇಲ್ಲದೇ ಇರುವುದೇ ಈ ಸೋಲಿಗೆ ಕಾರಣ.
ಇದೇ ಕಾರಣಕ್ಕೆ ಇದೀಗ ಹೈಕಮಾಂಡ್ ಕೂಡಾ ಕರ್ನಾಟಕದ ಬಿಜೆಪಿ ನಾಯಕರ ಮೇಲೆ ಮುನಿಸಿಕೊಂಡಿದೆ. ಬಳ್ಳಾರಿಯಲ್ಲಿ ಸ್ಥಳೀಯ ನಾಯಕ ಶ್ರೀರಾಮುಲು ಬಿಟ್ಟರೆ ಬೇರೆ ಯಾರೂ ಹೇಳಿಕೊಳ್ಳುವಂತಹ ಪ್ರಚಾರ ನಡೆಸಿಲ್ಲ. ಶಿವಮೊಗ್ಗದಲ್ಲಿ ತಮ್ಮ ತವರು ಮತ್ತು ಪುತ್ರ ಸ್ಪರ್ಧಿಸುತ್ತಿದ್ದಾರೆಂಬ ಕಾರಣಕ್ಕೆ ಬಿಎಸ್ ಯಡಿಯೂರಪ್ಪ ತಾವೇ ಖುದ್ದಾಗಿ ನಿಂತು ಪ್ರಚಾರ ನಡೆಸಿದರು. ಆದರೆ ಉಳಿದ ನಾಯಕರು ಈ ಕ್ಷೇತ್ರದ ಕಡೆಗೆ ತಲೆಯೂ ಹಾಕಲಿಲ್ಲ. ಕನಿಷ್ಠ ಸಾಮಾಜಿಕ ಜಾಲತಾಣಗಳಲ್ಲೋ, ಹೇಳಿಕೆ ಮುಖಾಂತರವೋ ತಮ್ಮ ಪಕ್ಷದ ಪರ ಸಮರ್ಥಿಸುವ ಕೆಲಸವನ್ನೂ ಮಾಡಲಿಲ್ಲ.
ರಾಮನಗರ, ಮಂಡ್ಯ ಬಗ್ಗೆ ಬಿಜೆಪಿ ಸಂಪೂರ್ಣವಾಗಿ ನಿರ್ಲಕ್ಷ್ಯ ಧೋರಣೆ ಅನುಸರಿಸಿತು. ಆದರೆ ಕಾಂಗ್ರೆಸ್ ಮತ್ತು ಜೆಡಿಎಸ್ ನ ಘಟಾನುಘಟಿ ನಾಯಕರೇ ಜತೆಯಾಗಿ ಪ್ರಚಾರಕ್ಕಿಳಿದಿದ್ದರು. ಹೀಗಾಗಿ ಸಹಜವಾಗಿಯೇ ಬಿಜೆಪಿ ನಾಯಕರ ಮತ್ತು ನಾಯಕತ್ವದ ಮೇಲೆ ಜನ ಅನುಮಾನದಿಂದಲೇ ನೋಡುವಂತಾಗಿದೆ.
ಆಡಳಿತ ಪಕ್ಷವನ್ನು ಖಡಾ ಖಂಡಿತವಾಗಿ ಖಂಡಿಸುವ ಧ್ವನಿಯಿಲ್ಲದೇ, ವಿರೋಧ ಪಕ್ಷವಾಗಿಯೂ ಕಡ್ಡಿ ಮುರಿದಂತೆ ಕೆಲಸ ಮಾಡದೇ, ತಮ್ಮ ಪಕ್ಷದಿಂದ ಜನರು ಹೊಸತನ ನಿರೀಕ್ಷಿಸಬಹುದು ಎಂಬ ಭರವಸೆ ಮೂಡಿಸದೇ ಬಿಜೆಪಿ ಸಪ್ಪೆಯಾಗಿದೆ. ಇದೇ ಕಾರಣಕ್ಕೆ ಸೋಲುತ್ತಿದೆ. ಇದು ಹೀಗೇ ಮುಂದುವರಿದರೆ ಲೋಕಸಭೆ ಚುನಾವಣೆಯಲ್ಲೂ ಇದೇ ಕತೆ ಗ್ಯಾರಂಟಿ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.