ಇಂದಿನಿಂದ ಬಜೆಟ್ ಅಧಿವೇಶನ: ಸಿದ್ದು ಬಜೆಟ್ ನಲ್ಲಿ ಯಾವೆಲ್ಲಾ ಭಾಗ್ಯ ಸಿಗಲಿದೆ?

Krishnaveni K

ಸೋಮವಾರ, 12 ಫೆಬ್ರವರಿ 2024 (09:35 IST)
ಬೆಂಗಳೂರು: ಇಂದಿನಿಂದ ಸಿಎಂ ಸಿದ್ದರಾಮಯ್ಯ ಸರ್ಕಾರದ  ಬಜೆಟ್ ಅಧಿವೇಶನ ಆರಂಭವಾಗಲಿದೆ. ಇಂದು ಮೊದಲ ದಿನ ರಾಜ್ಯಪಾಲರು ಜಂಟಿ ಸದನವನ್ನುದ್ದೇಶಿಸಿ ಮಾತನಾಡಲಿದ್ದಾರೆ.

ಫೆಬ್ರವರಿ 16 ರಂದು ಸಿಎಂ ಸಿದ್ದರಾಮಯ್ಯ 2024-25 ನೇ ಸಾಲಿನ ಬಜೆಟ್ ಮಂಡಿಸಲಿದ್ದಾರೆ. ಇಂದು ಬೆಳಿಗ್ಗೆ 11 ಗಂಟೆಗೆ ರಾಜ್ಯಪಾಲ ಥ್ಯಾವರ್ ಚಂದ್ ಗೆಹ್ಲೋಟ್ ಉಭಯ ಸದನವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಬಳಿಕ ವಿಧಾನಪರಿಷತ್ ಮತ್ತು ವಿಧಾನಸಭೆಯಲ್ಲಿ ಅಗಲಿದ ಗಣ್ಯರಿಗೆ ಸಂತಾಪ ನಡೆಯಲಿದೆ. ಇದು ಒಟ್ಟು 10 ದಿನಗಳ ಅಧಿವೇಶನವಾಗಿದ್ದು, ಫೆಬ್ರವರಿ 23 ಕ್ಕೆ ಕೊನೆಯಾಗಲಿದೆ.

ಸರ್ಕಾರದ ವಿರುದ್ಧ ದಾಳಿಗೆ ಸಿದ್ಧವಾದ ವಿಪಕ್ಷಗಳು
ಈ ಬಾರಿ ಅಧಿವೇಶನದಲ್ಲಿ ಮುಂದಿನ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ವಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ಕೆಲವೊಂದು ವಿಚಾರದಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ ಮಾಡಿಕೊಂಡಿದೆ. ತೆರಿಗೆ ವಿಚಾರದಲ್ಲಿ ಕೇಂದ್ರದ ವಿರುದ್ಧ ರಾಜ್ಯ ಸರ್ಕಾರ ಸಮರ ಹೂಡಿತ್ತು. ಅದನ್ನು ಇನ್ನಷ್ಟು ಗಟ್ಟಿಗೊಳಿಸಲು ಸಿದ್ಧತೆ ನಡೆಸಿದೆ. ಹೀಗಾಗಿ ಇದಕ್ಕೆ ಪ್ರತಿಯಾಗಿ ರಾಜ್ಯ ಪ್ರತಿಪಕ್ಷ ನಾಯಕರು ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ಬರ ಪರಿಹಾರ, ನಿರ್ವಹಣೆ, ಹಿಂದೂ ವಿರೋಧಿ ಧೋರಣೆ, ಗ್ಯಾರಂಟಿ ಯೋಜನೆ ಅನುಷ್ಠಾನ ವೈಫಲ್ಯವನ್ನು ಅಸ್ತ್ರವಾಗಿ ಬಳಸಲು ಸಿದ್ಧತೆ ನಡೆಸಿದೆ. ರಾಜ್ಯಕ್ಕೆ ಭೇಟಿ ನೀಡಿದ್ದ ಅಮಿತ್ ಶಾ ಕೂಡಾ ಗ್ಯಾರಂಟಿ ಯೋಜನೆಗಳ ವೈಫಲ್ಯದ ವಿಚಾರವಾಗಿ ರಾಜ್ಯ ನಾಯಕರೊಂದಿಗೆ ಚರ್ಚೆ ನಡೆಸಿದ್ದರು. ಹೀಗಾಗಿ ಬಿಜೆಪಿ ಶಾಸಕರು ಇದನ್ನೇ ಸರ್ಕಾರದ ವಿರುದ್ಧ ಆಯುಧವಾಗಿ ಬಳಸುವುದು ಗ್ಯಾರಂಟಿಯಾಗಿದೆ.

ಸಿದ್ದು ಬಜೆಟ್ ಮೇಲೆ ನಿರೀಕ್ಷೆ
ಇನ್ನು, ಲೋಕಸಭೆ ಚುನಾವಣೆ ಬೆನ್ನಲ್ಲೇ ಈ ಬಜೆಟ್ ಮಂಡನೆಯಾಗುತ್ತಿರುವುದರಿಂದ ಮತದಾರರನ್ನು ಸೆಳೆಯುವ ಉದ್ದೇಶದಿಂದ ಸಿದ್ದು ಸರ್ಕಾರ ಕೆಲವು ಆಕರ್ಷಕ ಘೋಷಣೆಗಳನ್ನು ಮಾಡುವ ನಿರೀಕ್ಷೆಯಿದೆ. ರಾಜ್ಯದಲ್ಲಿ ಬರ ಹಿನ್ನಲೆಯಲ್ಲಿ ಕುಡಿಯುವ ನೀರಿಗೂ ತತ್ವಾರವಾಗಿದ್ದು, ಈ ಸಂಬಂಧ ಅನುದಾನ ಘೋಷಣೆಯಾಗುವ ಸಾಧ‍್ಯತೆಯಿದೆ. ಇದಲ್ಲದೆ, ಕಳಸಾ ಬಂಡೂರಿ, ಮಹದಾಯಿ ಯೋಜನೆ, ಕೃಷ್ಣಾ ಮೇಲ್ಡಂಡೆ ಸೇರಿ ವಿವಿಧ ನೀರಾವರಿ ಯೋಜನೆಗಳಿಗೆ ಹಣ ಸಿಗುವ ನಿರೀಕ್ಷೆಯಿದೆ. ಇದಲ್ಲದೆ, ತುಮಕೂರು ಮೆಟ್ರೋ ಅಭಿವೃದ್ಧಿ, ಮಂಡ್ಯದಲ್ಲಿ ಹೊಸ ಸಕ್ಕರೆ ಕಾರ್ಖಾನೆ, ಬೆಂಗಳೂರಿನಲ್ಲಿ ಆಮೆಗತಿಯಲ್ಲಿ ಸಾಗುತ್ತಿರುವ ಕಾಮಗಾರಿಗಳನ್ನು ಪೂರ್ತಿ ಮಾಡಲು ಹಣ ಘೋಷಣೆಯಾಗುವ ನಿರೀಕ್ಷೆಗಳಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ