ಬೆಂಗಳೂರು: ಈ ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ 40% ಕಮಿಷನ್ ಆರೋಪ ಮಾಡಿ ಬಿಜೆಪಿ ಅಧಿಕಾರ ಕಳೆದುಕೊಳ್ಳುವಂತೆ ಮಾಡಿತ್ತು.
ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಕಾಂಗ್ರೆಸ್ 40 % ಕಮಿಷನ್ ಆರೋಪ ಮಾಡಿದ್ದು ಬಿಜೆಪಿಗೆ ಭಾರೀ ಮುಳುವಾಗಿತ್ತು. ಆದರೆ ವಿಪರ್ಯಾಸವೆಂದರೆ ಈಗ ಕಾಂಗ್ರೆಸ್ ಸರ್ಕಾರದ ವಿರುದ್ಧವೂ 40% ಕಮಿಷನ್ ಆರೋಪ ಕೇಳಿಬಂದಿದೆ. ಈಗಿನ ಕಾಂಗ್ರೆಸ್ ಸರ್ಕಾರದಲ್ಲೂ 40% ಕಮಿಷನ್ ದಂದೆ ನಡೆಯುತ್ತಿದೆ ಎಂದು ಕರ್ನಾಟಕ ಸ್ಟೇಟ್ ಕಂಟ್ರಾಕ್ಟರ್ ಅಸೋಷಿಯೇಷನ್ ಅಧ್ಯಕ್ಷ ಡಿ. ಕೆಂಪಣ್ಣ ಆರೋಪ ಮಾಡಿದ್ದಾರೆ.
ವಿಶೇಷವೆಂದರೆ ಈ ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧವೂ ಕೆಂಪಣ್ಣ ಈ ಆರೋಪ ಮಾಡಿದ್ದರು. ಲೋಕೋಪಯೋಗಿ ಇಲಾಖೆ ಹೊರತುಪಡಿಸಿ ಉಳಿದೆಲ್ಲಾ ಇಲಾಖೆಗಳಲ್ಲೂ ಇಂಜಿನಿಯರ್ ಗಳು 40% ಕಮಿಷನ್ ಕೇಳುತ್ತಿದ್ದಾರೆ. ಇದಕ್ಕೆಲ್ಲಾ ಶಾಸಕರು, ಸಚಿವರತ್ತ ಬೊಟ್ಟು ಮಾಡುತ್ತಿದ್ದಾರೆ ಎಂದಿದ್ದಾರೆ. ಇದು ಕಾಂಗ್ರೆಸ್ ಸರ್ಕಾರಕ್ಕೆ ತೀವ್ರ ಮುಜುಗರ ತಂದಿದೆ.
ಮೊದಲೆಲ್ಲಾ ಸಚಿವರು ನೇರವಾಗಿ ಕಮಿಷನ್ ಕೇಳುತ್ತಿದ್ದರು. ಆದರೆ ಈಗ ತಮ್ಮ ಇಲಾಖೆ ಅಧಿಕಾರಿಗಳ ಮೂಲಕ ಕೇಳಿಸುತ್ತಿದ್ದಾರೆ. ಹಿಂದೆ ಇದ್ದ ಭ್ರಷ್ಟಾಚಾರ ಈಗಲೂ ಮುಂದುವರಿದಿದೆ ಎಂದಿದ್ದಾರೆ. ಅವರ ಈ ಹೇಳಿಕೆ ಕಾಂಗ್ರೆಸ್ ಸರ್ಕಾರಕ್ಕೆ ಮುಜುಗರ ತಂದಿದೆ.
ಪೊಲೀಸ್ ವಸತಿ ನಿಗಮ, ಬಿಬಿಎಂಪಿ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ ಸೇರಿ ಎಲ್ಲಾ ಇಲಾಖೆಯ ಟೆಂಡರ್ ನಲ್ಲಿ ಭ್ರಷ್ಟಾಷಾರ ನಡೆಯುತ್ತಿದೆ. ಈ ಬಗ್ಗೆ ಶೀಘ್ರದಲ್ಲೇ ವಿಪಕ್ಷ ನಾಯಕ ಆರ್. ಅಶೋಕ್ ಅವರನ್ನು ಭೇಟಿಯಾಗಿ ಮಾಹಿತಿ ನೀಡುವುದಾಗಿ ಹೇಳಿದ್ದಾರೆ. ಕಾಮಗಾರಿ ಪೂರ್ಣಗೊಂಡರೂ ಸಚಿವರು, ಶಾಸಕರು ಹೇಳಿದವರಿಗೆ ಮಾತ್ರ ಬಾಕಿ ಹಣ ಬಿಡುಗಡೆಯಾಗುತ್ತಿದೆ ಎಂದಿದ್ದಾರೆ.