ಬೆಂಗಳೂರು: ಇಂದು ರಾಜ್ಯ ಸಚಿವ ಸಂಪುಟದಲ್ಲಿ ಜಾತಿಗಣತಿ ವರದಿ ಜಾರಿ ಬಗ್ಗೆ ಮಹತ್ವದ ಚರ್ಚೆಯಾಗಲಿದೆ. ಈಗಾಗಲೇ ಸಮೀಕ್ಷಾ ವರದಿ ಬಗ್ಗೆ ವಿವಿಧ ಸಮುದಾಯಗಳಿಂದ ಅಪಸ್ವರವೆದ್ದಿದ್ದು, ಕಾಂಗ್ರೆಸ್ ಹೈಕಮಾಂಡ್ ನಾಯಕ ರಾಹುಲ್ ಗಾಂಧಿ ಅಂದುಕೊಂಡಷ್ಟು ಸುಲಭವಾಗಿ ರಾಜ್ಯದಲ್ಲಿ ಜಾತಿಗಣತಿ ಜಾರಿ ಸಾಧ್ಯವಿಲ್ಲ ಎಂಬ ಸೂಚನೆ ಸಿಕ್ಕಿದೆ.
ದೇಶದಾದ್ಯಂತ ಜಾತಿಗಣತಿಯಾಗಬೇಕು. ಎಲ್ಲಾ ಸಮುದಾಯಗಳಿಗೂ ದೇಶದ ಸಂಪತ್ತಿನ ಸಮಪಾಲು ಸಿಗಬೇಕು. ಇದಕ್ಕಾಗಿ ಜಾತಿಗಣತಿ ಅಗತ್ಯ ಎಂದು ರಾಹುಲ್ ಗಾಂಧಿ ಹೇಳುತ್ತಲೇ ಇದ್ದಾರೆ. ಈಗಾಗಲೇ ತೆಲಂಗಾಣದಲ್ಲಿ ಯಶಸ್ವಿಯಾಗಿ ಜಾತಿಗಣತಿ ಜಾರಿಗೆ ತಂದಿದ್ದೇವೆ ಎಂದಿದ್ದಾರೆ.
ಇದರ ಬೆನ್ನಲ್ಲೇ ಈಗ ಕಾಂಗ್ರೆಸ್ ಆಡಳಿತವಿರುವ ಕರ್ನಾಟಕದಲ್ಲೂ ಜಾತಿಗಣತಿ ಜಾರಿ ಮಾಡಲು ಸರ್ಕಾರ ಮುಂದಾಗಿದೆ. ಆದರೆ ಯಾವಾಗ ಜಾತಿಗಣತಿ ವರದಿಗಳು ಸೋರಿಕೆಯಾದವೋ ಅಂದಿನಿಂದ ಎಲ್ಲಾ ಸಮುದಾಯಗಳೂ ಸಿಡಿದೆದ್ದಿವೆ. ಅದರಲ್ಲೂ ವಿಶೇಷವಾಗಿ ರಾಜ್ಯದ ಪ್ರಬಲ ಸಮುದಾಯಗಳಾದ ಲಿಂಗಾಯತ, ಒಕ್ಕಲಿಗ ಸಮುದಾಯವೇ ಜಾತಿಗಣತಿ ವರದಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿವೆ. ರಂಭಾಪುರಶ್ರೀಗಳು ಈ ವರದಿ ಜಾರಿಯಾದರೆ ಸರ್ಕಾರ ಪತನವಾಗುತ್ತದೆ ಎಂದು ಎಚ್ಚರಿಕೆ ವಹಿಸಿದ್ದಾರೆ.
ಇನ್ನು ತಮ್ಮ ಸಮುದಾಯವನ್ನು ಎದುರು ಹಾಕಿಕೊಂಡು ಜಾತಿಗಣತಿ ಜಾರಿಗೆ ಒಪ್ಪಿಗೆ ಕೊಡಲು ಯಾವ ಶಾಸಕರೂ ಸಿದ್ಧರಿಲ್ಲ. ನಾಳೆ ದಿನ ತಮಗೆ ಮತ ಹಾಕಲು ಇದೇ ಸಮುದಾಯಗಳು ಬೇಕು. ಹೀಗಾಗಿ ಕರ್ನಾಟಕದಲ್ಲಿ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ನಾಯಕರು ಅಂದುಕೊಂಡಷ್ಟು ಸುಲಭವಾಗಿ ಜಾತಿಗಣತಿ ವರದಿ ಜಾರಿ ಮಾಡಲು ಸಾಧ್ಯವಿಲ್ಲ.