ನೀರಾವರಿ ವಿಷಯದಲ್ಲಿ ಕರ್ನಾಟಕಕ್ಕೆ ವಂಚನೆ: ಮಾಜಿ ಪ್ರಧಾನಿ ದೇವೇಗೌಡ ಆರೋಪ
ನೀರಾವರಿ ವಿಷಯದಲ್ಲಿ ಕರ್ನಾಟಕಕ್ಕೆ ದೊಡ್ಡ ವಂಚನೆ ಆಗಿದೆ. ಈ ಬಗ್ಗೆ ದೊಡ್ಡ ಹೋರಾಟ ನಡೆಯಬೇಕಾಗಿದೆ. ನನಗೆ ಆಗಲ್ಲ ಅಂದರೂ ಹೋರಾಟ ಮಾಡ್ತೀನಿ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದ್ದಾರೆ.
ಮೈಸೂರಿನ ಎಚ್.ಡಿ. ಕೋಟೆ ತಾಲೂಕಿನ ಬೀಚೆನಹಳ್ಳಿಯಲ್ಲಿ ಕಬಿನಿ ಜಲಾಶಯದ ಬಳಿ ಜಲಧಾರೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು, ಸುದ್ದಿಗಾರರೊಂದಿಗೆ ಮಾತನಾಡುವಾಗ ಈ ವಿಷಯ ಹಂಚಿಕೊಂಡರು.
ಕಬಿನಿ ಜಲಾಶಯದ ಕಾಮಗಾರಿಗಳಲ್ಲೂ ಸಾಕಷ್ಟು ಸಮಸ್ಯೆಗಳು ಎದುರಾಗಿದ್ದವು. ಆಗ ನಾನು ಹೋರಾಟ ಮಾಡಿ ಕೆಲಸ ಮಾಡಿಸಿದ್ದೆ. ಈಗ ಮಹದಾಯಿ ವಿಷಯದಲ್ಲಿ ಅನ್ಯಾಯ ಆಗುತ್ತಿದ್ದರೂ ಯಾರೂ ಧ್ವನಿ ಎತ್ತುತ್ತಿಲ್ಲ ಎಂದರು.
ರಾಜ್ಯದ ಜನರ ನೀರಿಗಾಗಿ ನಡೆಯುವ ಹೋರಾಟ ಇದಾಗಿದ್ದು, ಇಲ್ಲಿ ಜಾತಿ, ಧರ್ಮದ ವಿಚಾರ ಅಲ್ಲ. ,ನಾನೊಬ್ಬ ರೈತನಾಗಿ ಹೋರಾಟ ಮಾಡುತ್ತಿದ್ಧೆನೆ. ನಿಮ್ಮ ಜೊತೆ ಇದ್ದೇನೆ ಎಂದು ಅವರು ಭರವಸೆ ನೀಡಿದರು.
ನದಿ ನೀರಿನ ವಿಷಯ ಬಂದಾಗ ತಮಿಳುನಾಡಿನಲ್ಲಿ ಎಲ್ಲಾ ಪಕ್ಷಗಳು ಒಂದಾಗುತ್ತವೆ. ಆದರೆ ನಮ್ಮ ರಾಜ್ಯದಲ್ಲಿ ಹಾಗೆ ಆಗುವುದಿಲ್ಲ. ರಾಜ್ಯದ ನದಿ ನೀರಿನ ವಿಷಯ ಮಾತನಾಡಲು ಜಲ ಸಂಪನ್ಮೂಲ ಸಚಿವರು ೩ ಬಾರಿ ಸಮಯ ಕೇಳಿದ್ದೆ. ಸಮಯ ನೀಡಿದ ಅವರ ಬಳಿ ಹೋದಾಗ ಅವರೇ ಚಕ್ಕರ್ ಹೊಡೆದಿದ್ದರು ಎಂದು ದೇವೇಗೌಡರು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದ ನೀರಾವರಿ ಇಲಾಖೆ ಅತೀ ಹೆಚ್ಚು ಭ್ರಷ್ಟಾಚಾರ ನಡೆಯುತ್ತಿದೆ ಎಂದು ಗುತ್ತಿಗೆದಾರರ ಸಂಘದ ಆರೋಪದ ಬಗ್ಗೆ ಪ್ರತಿಕ್ರಿಯಿಸಿಲು ನಿರಾಕರಿಸಿದ ಅವರು, ನನ್ನ ಮಗ ನೀರಾವರಿ ಸಚಿವ ಆಗಿದ್ದನಾ? ಅವನು ಸಚಿವ ಆಗಿದ್ದರೆ ನಾನು ಪರ್ಸೆಂಟೆಜ್ ಬಗ್ಗೆ ಮಾತನಾಡುತ್ತಿದ್ದೆ ಎಂದು ಹೇಳಿದರು.