ಚಳಿಗಾಲ ಅಧಿವೇಶನ: ಸರಕಾರದ ಚಳಿ ಬಿಡಿಸಲು ಸಿದ್ಧನಾದ ಅನ್ನದಾತ

ಗುರುವಾರ, 20 ಅಕ್ಟೋಬರ್ 2016 (13:46 IST)

ಬೆಳಗಾವಿ: ಕಾವೇರಿ ನದಿ ನೀರು ಹಂಚಿಕೆ, ಮಹದಾಯಿ ಯೋಜನೆ ಅನುಷ್ಠಾನದ ಗದ್ದಲದ ನಡುವೆಯೇ ಸರಕಾರ ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನ ನಡೆಸಲು ಮಹೂರ್ತ ಫಿಕ್ಸ್ ಮಾಡಿದೆ. ನವೆಂಬರ್ 21ರಿಂದ ಡಿಸೆಂಬರ್ 7ರ ವರೆಗೆ, ಒಟ್ಟು ಹದಿನೈದು ದಿನಗಳ ಕಾಲ ಈ ವಿಶೇಷ ಅಧಿವೇಶನ ನಡೆಯಲಿದೆ.
 

ಸಾಂದರ್ಭಿಕ ಫೋಟೋ

ಸಚಿವ ಸಂಪುಟ ಸಭೆಯಲ್ಲಿ ಚಳಿಗಾಲ ಅಧೀವೇಶನದ ಕುರಿತು ತೀರ್ಮಾನ ಕೈಗೊಂಡ ಬಳಿಕ ಕಾನೂನು ಸಚಿವ ಟಿ.ಬಿ. ಜಯಚಂದ್ರ ಮಾಧ್ಯಮಕ್ಕೆ ತಿಳಿಸಿದ್ದಾರೆ. ಸಾಕಷ್ಟು ಗದ್ದಲ ಹಾಗೂ ಆರೋಪಗಳ ನಡುವೆಯೇ ಸರಕಾರ ಅಧಿವೇಶನ ನಡೆಸಲು ಸಿದ್ಧವಾಗಿದ್ದು, ಪ್ರತಿಕ್ಷಗಳ ಮೀಸೆಯ ಮೇಲೆ ಸಣ್ಣದೊಂದು ಕಿರುನಗೆ ಮೂಡಿದಂತಾಗಿದೆ. ಸಂಬಂಧಿಸಿ ಜೆಡಿಎಸ್ ಹಾಗೂ ಬಿಜೆಪಿ ಮುಖಂಡರು ಈಗಾಗಲೇ ಯಾವೆಲ್ಲ ಪ್ರಶ್ನೆಗಳನ್ನು ಕೇಳಿ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಬೇಕು ಎನ್ನುವ ಕುರಿತು ಚರ್ಚೆ ನಡೆಸುತ್ತಿದ್ದಾರೆ. ಪಕ್ಷದ ಕೋರ್ ಕಮಿಟಿ ಸಭೆಯನ್ನು ಶೀಘ್ರವೇ ಕರೆದು, ಸರಕಾರದ ಲೋಪ-ದೋಷಗಳ ಕುರಿತು ಚರ್ಚಿಸಲಿದ್ದಾರೆ. ಅಲ್ಲದೆ, ಈಗಾಗಲೇ ಸರಕಾರದ ಮೇಲಿರುವ ಪ್ರಮುಖ ಆರೋಪಗಳ ಕುರಿತಾಗಿರುವ  ದಾಖಲೆ ಪತ್ರಗಳನ್ನು ಸಹ ಸಂಗ್ರಹಿಸಲು ವಿಶೇಷ ತಂಡವೊಂದನ್ನು ರಚನೆ ಮಾಡಿದೆ ಎನ್ನಲಾಗುತ್ತಿದೆ.

 

ಎರಡು ವಾರದ ಬಳಿಕ ಬೆಳಗಾವಿಯ ಸುವರ್ಣ ಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಯಲಿರುವುದಿಂದ, ಸಂಪೂರ್ಣ ಆಡಳಿತ ಯಂತ್ರವೇ ಬೆಳಗಾವಿ ವರ್ಗಾವಣೆಯಾಗಲಿದೆ. ಅಧಿಕಾರಿಗಳ ವರ್ಗ ವಾರಕ್ಕಿಂತ ಮೊದಲೇ ಅಲ್ಲಿ ಹಾಜರಿದ್ದು ಎಲ್ಲ ಪೂರ್ವ ತಯಾರಿಯನ್ನು ಮಾಡಿಕೊಳ್ಳಲಿದೆ. ಪೊಲೀಸ್ ಇಲಾಖೆಯಂತೂ ಹದಿನೈದು ದಿನ ಮೊದಲೇ ಸುವರ್ಣ ಸೌಧದ ಸುತ್ತಮುತ್ತಲಿನ ಪ್ರದೇಶಗಳ ಮೇಲೆ ಹದ್ದಿನ ಕಣ್ಣಿಟ್ಟು ವೀಕ್ಷಣೆ ಮಾಡಲಿದೆ. ಅಲ್ಲಿರುವ ಐಷಾರಾಮಿ ಹೊಟೇಲ್ ಗಳೆಲ್ಲ ಈಗಾಗಲೇ ಬುಕ್ಕಿಂಗ್ ಆಗಿದ್ದು, ಸಣ್ಣ-ಪುಟ್ಟ ಹೊಟೇಲ್, ವಸತಿ ಗೃಹಗಳು ನಿಧಾನವಾಗಿ ಬುಕ್ ಆಗುತ್ತಿವೆ.
 

ಸರಕಾರದ ಆಡಳಿತ ಯಂತ್ರವೇ ಬೆಳಗಾವಿಗೆ ಆಗಮಿಸುವುದರಿಂದ ಗೂಟದ ಕಾರ್ ಗಳ ಓಡಾಟ ಎಲ್ಲೆ ಮೀರಲಿದೆ. ನಿಶ್ಚಿಂತೆಯಿಂದ ರಾತ್ರಿ ಕಳೆಯುವ ಬೆಳಗಾವಿ ನಗರದ ಜನತೆ, ರಾತ್ರಿಯನ್ನು ಸಹ ಹದಿನೈದು ದಿನಗಳ ಕಾಲ ಹಗಲನ್ನಾಗಿ ನೋಡಲಿದ್ದಾರೆ. ಈಗಾಗಲೇ ಬೆಳಗಾವಿ ಜಿಲ್ಲಾಡಳಿತ ತಾನು ಕೈಗೊಳ್ಳಬೇಕಾದ ಪ್ರಾಥಮಿಕ ಜವಾಬ್ದಾರಿಯನ್ನು ಪೂರೈಸಿದೆ. ಅದರ ಜತೆಗೆ, ಬೆಳಗಾವಿ ಜಿಲ್ಲೆಯ ಸುತ್ತಮುತ್ತಲಿನ ಭಾಗದ ರೈತರು ಹಾಗೂ ರೈತ ಸಂಘಟನೆಗಳು ಸರಕಾರಕ್ಕೆ ತಕ್ಕ ಪಾಠ ಕಲಿಸಿ, ಚಳಿ ಬಿಡಿಸಲು ಯೋಜನೆ ರೂಪಿಸಿಕೊಂಡಿದ್ದಾರೆ. ಯಾಕೆಂದರೆ ಈ ಬಾರಿ ಬರೊಬ್ಬರಿ ಕಬ್ಬು ನುರಿಸುವ ಹಂಗಾಮಿನಲ್ಲಿಯೇ ಚಳಿಗಾಲದ ಅಧಿವೇಶನ ಆರಂಭವಾಗಲಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ