ಬೆಂಗಳೂರು: ಇಂದು ಕರ್ನಾಟಕ ಎಸ್ಎಸ್ಎಲ್ ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಲಿದ್ದು, ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ಬಯಲಾಗಲಿದೆ. ಆನ್ ಲೈನ್ ಮೂಲಕ ಎಲ್ಲಿ ರಿಸಲ್ಟ್ ನೋಡಬೇಕು ಎಂಬ ಮಾಹಿತಿ ಇಲ್ಲಿದೆ.
ಮಾರ್ಚ್ 25 ರಿಂದ ಏಪ್ರಿಲ್ 6 ರವರೆಗೆ ಕರ್ನಾಟಕ ಎಸ್ಎಸ್ಎಲ್ ಸಿ ಪರೀಕ್ಷೆಗಳು ನಡೆದಿತ್ತು.ಈ ಬಾರಿ ಒಟ್ಟು 8.69 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ 4,41,910 ಬಾಲಕರು ಮತ್ತು 4,28,058 ವಿದ್ಯಾರ್ಥಿನಿಯರು ಸೇರಿದ್ದಾರೆ. ಇವರೆಲ್ಲರ ಭವಿಷ್ಯ ಇಂದು ಬೆಳಿಗ್ಗೆ 10.30 ಕ್ಕೆ ತಿಳಿಯಲಿದೆ.
ಆನ್ ಲೈನ್ ಮೂಲಕವೂ ಪರೀಕ್ಷೆ ಫಲಿತಾಂಶ ವೀಕ್ಷಿಸಬಹುದಾಗಿದ್ದು ಇದಕ್ಕಾಗಿ ಶಿಕ್ಷಣ ಇಲಾಖೆ ಎರಡು ವೆಬ್ ತಾಣಗಳ ವಿಳಾಸ ನಿಗದಿಪಡಿಸಿದೆ. karresults.nic.in ಮತ್ತು kseab.karnataka.gov.in ಎಂಬ ವೆಬ್ ಸೈಟ್ ನಲ್ಲಿ ಫಲಿತಾಂಶ ವೀಕ್ಷಿಸಬಹುದಾಗಿದೆ. ಆನ್ ಲೈನ್ ನಲ್ಲಿ ಫಲಿತಾಂಶ ವೀಕ್ಷಿಸಲು ನಿಮ್ಮ ಅಪ್ಲಿಕೇಷನ್ ಸಂಖ್ಯೆ, ಜನ್ಮದಿನಾಂಕ ಬೇಕಾಗುತ್ತದೆ.
ಮೇಲೆ ಹೇಳಿದ ಎರಡು ವೆಬ್ ಸೈಟ್ ಗಳ ಪೈಕಿ ಯಾವುದಾದರೂ ಒಂದು ವೆಬ್ ಸೈಟ್ ಗೆ ಹೋಗಿ ಎಸ್ಎಸ್ಎಲ್ ಸಿ ರಿಸಲ್ಟ್ಸ್ 2024 ಲಿಂಕ್ ನ್ನು ಒತ್ತಿ. ಹೊಸ ಲಾಗಿನ್ ಪುಟ ತೆರೆಯುತ್ತದೆ. ಅಲ್ಲಿ ನಿಮ್ಮ ಅಪ್ಲಿಕೇಷನ್ ಸಂಖ್ಯೆ ಮತ್ತು ಜನ್ಮದಿನಾಂಕ ನಮೂದಿಸಿ. ಆಗ ಫಲಿತಾಂಶ ಸಿಗುತ್ತದೆ. ಫಲಿತಾಂಶವನ್ನು ಡೌನ್ ಲೋಡ್ ಮಾಡಲೂ ಅವಕಾಶ ಕಲ್ಪಿಸಲಾಗಿದೆ.