ಬೆಂಗಳೂರು: ಭೂಗತರಾಗಿದ್ದ ಆರು ನಕ್ಸಲರು ಶಸ್ತ್ರಾಸ್ತ್ರ ತೊರೆದು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಜಿ ಪರಮೇಶ್ವರ್ ಶರಣಾಗತಿ ಆಗಿದ್ದರು. ಇಂದು ಅವರನ್ನು ಚಿಕ್ಕಮಗಳೂರು ಡಿವೈಎಸ್‌ಪಿ ಬಾಲಾಜಿ ಸಿಂಗ್ ಎನ್‌ಐಎ ವಿಶೇಷ ಕೋರ್ಟ್‌ನ ನ್ಯಾಯಾಧೀಶರಾದ ಗಂಗಾಧರ್ ಮುಂದೆ ಹಾಜರುಪಡಿಸಲಾಯಿತು.
ಇದೀಗ ಕೋರ್ಟ್ ಅವರಿಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದೆ.
ರಾಜ್ಯದ ನಕ್ಸಲ್ ನಾಯಕರಾದ ಮುಂಡಗಾರು ಲತಾ, ಸುಂದರಿ ಕೊತ್ಲೂರು, ವನಜಾಕ್ಷಿ ಬಾಳೆಹೊಳೆ, ಜಿಶಾ, ವಸಂತ್ ಟಿಎನ್ ಮಾರೆಪ್ಪ ಆರೋಲಿ ಅವರನ್ನು ಇದೀಗ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಯಿತು.
ಕರ್ನಾಟಕವನ್ನು ನಕ್ಸಲ್ ಮುಕ್ತ ರಾಜ್ಯವನ್ನಾಗಿ ಮಾಡಲು ಹೆಜ್ಜೆ ಇಟ್ಟಿರುವ ಕಾಂಗ್ರೆಸ್ ಸರ್ಕಾರದ ಮುಂದೆ 6 ನಕ್ಸಲ್ ನಾಯಕರು ಶರಣಾಗಿದ್ದರು.
ನಕ್ಸಲರನ್ನು ಕೋರ್ಟ್ಗೆ ಹಾಜರು ಪಡಿಸಿರುವ ಹಿನ್ನೆಲೆಯಲ್ಲಿ ಖುದ್ದು ಡಿಸಿಪಿ ಹೆಚ್.ಟಿ. ಶೇಖರ್ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ವಹಿಸಲಾಗಿತ್ತು. ನಕ್ಸಲರನ್ನು ಕೋರ್ಟ್ಗೆ ಹಾಜರುಪಡಿಸುವ ಮುನ್ನ 6 ನಕ್ಸಲರಿಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್ ನಡೆಸಲಾಗಿತ್ತು. ಅವರ ಆರೋಗ್ಯ ಸ್ಥಿರವಾಗಿದೆ ಎಂದು ಖಚಿತಪಡಿಸಿಕೊಳ್ಳಲಾಗಿತ್ತು.