ಮಂಗಳೂರು: ಧರ್ಮಸ್ಥಳ ಬುರುಡೆ ಪ್ರಕರಣ ತನಿಖೆ ಸಂಬಂಧ ಇಂದು ಸಾಕ್ಷಿ ದೂರುದಾರ ಚಿನ್ನಯ್ಯಗೆ ತಂದೊಪ್ಪೊಸಿದ್ದ ಬುರುಡೆ ಇದ್ದ ಜಾಗವನ್ನು ತೋರಿಸಿದ್ದ ಪಾಂಗಾಳದ ವಿಠಲ ಗೌಡನನ್ನು ನೇತ್ರಾವತಿ ಸ್ನಾನಘಟ್ಟ ಪಕ್ಕದ ಕಾಡಿನೊಳಗೆ ಮತ್ತೊಮ್ಮೆ ಕರೆದೊಯ್ದು ಮಹಜರು ನಡೆಸಿದ್ದಾರೆ.
ಎಸ್‌ಐಟಿ ಕಚೇರಿಗೆ ಹಾಜರಾಗಿದ್ದ ವಿಠಲ ಗೌಡನ ಹೇಳಿಕೆ ದಾಖಲಿಸಿಕೊಂಡ ಅಧಿಕಾರಿಗಳು ಎಸ್.ಪಿ. ಸೈಮನ್ ನೇತೃತ್ವದಲ್ಲಿ ಬುರುಡೆ ಸಿಕ್ಕಿದ್ದ ಜಾಗಕ್ಕೆ ಕರೆದೊಯ್ದಿದ್ದಾರೆ.
ನೇತ್ರಾವತಿ ಸ್ನಾನಘಟ್ಟದ ಪಕ್ಕದ ಕಾಡಿನಲ್ಲಿ ಬುರುಡೆ ಇದ್ದ ಜಾಗವನ್ನು ವಿಠಲ ಗೌಡ ಅವರೇ ಸಾಕ್ಷಿದೂರುದಾರನಿಗೆ ತೋರಿಸಿದ್ದರು. ಅಲ್ಲಿಂದ ತೆಗೆದ ಬುರುಡೆಯನ್ನೇ ಸಾಕ್ಷಿ ದೂರುದಾರ ಪೊಲೀಸರ ವಶಕ್ಕೆ ಒಪ್ಪಿಸಿದ್ದ. ಆ ಜಾಗವನ್ನು ಎಸ್‌ಐಟಿ ಅಧಿಕಾರಿಗಳು ಸೆ.6ರಂದು ಸಂಜೆ ಮಹಜರು ನಡೆಸಿದ್ದರು. ಈ ವೇಳೆ ಆ ಪ್ರದೇಶದಲ್ಲಿ ಮೃತದೇಹ ಅವಶೇಷಗಳು ನೆಲದ ಮೇಲೆಯೇ ಕಂಡುಬಂದಿದ್ದವು. ಅಂದು ಕತ್ತಲಾವರಿಸಿದ್ದರಿಂದ ಆ ಪ್ರದೇಶವನ್ನು ಕೂಲಂಕಷವಾಗಿ ಪರಿಶೀಲಿಸುವುದು ಸಾಧ್ಯವಾಗಿರಲಿಲ್ಲ. ಹಾಗಾಗಿ ಹೆಚ್ಚಿನ ಮಾಹಿತಿ ಕಲೆ ಹಾಕಲು ಎಸ್‌ಐಟಿ ಅಧಿಕಾರಿಗಳು ವಿಠಲ ಗೌಡ ಅವರನ್ನು ಮತ್ತೊಮ್ಮೆ ಅಲ್ಲಿಗೆ ಕರೆದೊಯ್ದರು.