ಬೆಂಗಳೂರು: ಕಳೆದ ಒಂದು ವಾರದಿಂದ ಕರ್ನಾಟಕದಲ್ಲಿ ಅಲ್ಲಲ್ಲಿ ಮಳೆಯಾಗುತ್ತಲೇ ಇದೆ. ಇಂದಿನ ತಾಪಮಾನ ಹೇಗಿದೆ, ಯಾವ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.
ನಿನ್ನೆ ಕರ್ನಾಟಕದ ಕರಾವಳಿ ಭಾಗಗಳಲ್ಲಿ, ದಕ್ಷಿಣ ಕನ್ನಡ, ಶಿವಮೊಗ್ಗದಲ್ಲಿ ಭಾರೀ ಮಳೆಯಾಗಿತ್ತು. ಇಂದು ಕರ್ನಾಟಕದಲ್ಲಿ ಬೆಳಗ್ಗಿನ ತಾಪಮಾನ 27 ಡಿಗ್ರಿ ಸೆಲ್ಶಿಯಸ್ ನಷ್ಟಿದೆ. ಈಗ ಮೋಡ ಕವಿದ ವಾತಾವರಣವಿದ್ದು, ಮಧ್ಯಾಹ್ನದ ನಂತರ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ವರದಿ ಹೇಳುತ್ತಿದೆ.
ಬೆಂಗಳೂರಿನಲ್ಲಿ ನಿನ್ನೆ ರಾತ್ರಿ ಹಲವೆಡೆ ಮಳೆಯಾಗಿದೆ. ಇಂದೂ ಕೂಡಾ ವರುಣನ ಆಗಮನದ ನಿರೀಕ್ಷೆಯಿದೆ. ಸದ್ಯಕ್ಕೆ ಮೋಡ ಕವಿದ ವಾತಾವರಣವಿದ್ದು ತಾಪಮಾನ 27 ಡಿಗ್ರಿಯಷ್ಟಿದೆ. ಇಂದೂ ಕೂಡಾ ಮಧ‍್ಯಾಹ್ನದ ನಂತರ ಸಣ್ಣ ಮಟ್ಟಿಗೆ ಮಳೆಯಾಗುವ ಸೂಚನೆ ಕಂಡುಬರುತ್ತಿದೆ.
ಕರ್ನಾಟಕದಲ್ಲಿ ಇಂದು ಕರಾವಳಿ, ಶಿವಮೊಗ್ಗ, ಚಿತ್ರದುರ್ಗ, ಕೊಡಗು ಜಿಲ್ಲೆಗಳಲ್ಲಿ ಮಳೆಯಾಗಲಿದ್ದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಉತ್ತರ ಕನ್ನಡ, ಹಾವೇರಿ, ಗದಗ, ವಿಜಯನಗರ, ದಾವಣಗೆರೆ, ಧಾರವಾಡ ಜಿಲ್ಲೆಗಳಲ್ಲೂ ಮಳೆಯಾಗಲಿದ್ದು ಯೆಲ್ಲೊ ಅಲರ್ಟ್ ಘೋಷಿಸಲಾಗಿದೆ.