ಬೆಂಗಳೂರು: ರಾಜ್ಯದಲ್ಲಿ ಹವಾಮಾನದಲ್ಲಿ ದಿನೇ ದಿನೇ ಬದಲಾವಣೆಯಾಗುತ್ತಿದೆ. ಇಂದಿನ ಹವಾಮಾನ ವರದಿ ಪ್ರಕಾರ ಈ ಕೆಲವು ಜಿಲ್ಲೆಗಳಲ್ಲಿ ಇಂದು ರಣಬಿಸಿಲು ಕಂಡುಬರಲಿದೆ.
ಕರ್ನಾಟಕದಲ್ಲಿ ಈಗ ಕೆಲವು ಜಿಲ್ಲೆಗಳಲ್ಲಿ ದಿಡೀರ್ ಬೇಸಿಗೆ ಮಳೆಯಾಗುತ್ತಿದ್ದರೆ ಮತ್ತೆ ಕೆಲವು ಜಿಲ್ಲೆಗಳಲ್ಲಿ ತಾಪಮಾನ ದಾಖಲೆಯ ಮಟ್ಟಕ್ಕೆ ಏರಿಕೆಯಾಗುತ್ತಿದೆ. ಇಂದು ಕೆಲವು ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 40 ಡಿಗ್ರಿಯ ಆಸುಪಾಸು ಕಂಡುಬರಲಿದೆ ಎನ್ನುತ್ತಿದೆ ಹವಾಮಾನ ವರದಿಗಳು.
ಈ ವಾರದ ಆರಂಭದಲ್ಲಿ ಕರಾವಳಿ, ಚಿಕ್ಕಮಗಳೂರು ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಸಣ್ಣ ಮಳೆಯಾಗಿತ್ತು. ಆದರೆ ಇಂದು ಯಾವುದೇ ಜಿಲ್ಲೆಗಳಲ್ಲಿ ಮಳೆಯ ಸಾಧ್ಯತೆಯಿಲ್ಲ. ಆದರೆ ದಕ್ಷಿಣ ಕನ್ನಡ, ಕೊಡಗು, ಚಿಕ್ಕಮಗಳೂರು, ಹಾಸನ, ಮಂಡ್ಯ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಭಾಗಶಃ ಮೋಡಕವಿದ ವಾತಾವರಣವಿರಲಿದೆ.
ಇಂದು ಕರಾವಳಿ ಭಾಗದಲ್ಲಿ ಗರಿಷ್ಠ ತಾಪಮಾನ 36 ಡಿಗ್ರಿಯಷ್ಟು ಕಂಡುಬರಲಿದೆ. ರಾಯಚೂರು, ಬಳ್ಳಾರಿ, ಕಲಬುರಗಿ, ಬೆಳಗಾವಿ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 39 ಡಿಗ್ರಿಯ ಸನಿಹ ಕಂಡುಬರುವುದು. ಈ ಜಿಲ್ಲೆಗಳಿಗೆ ರಣ ಬಿಸಿಲಿನ ಎಚ್ಚರಿಕೆಯಿದೆ. ರಾಜ್ಯದ ಸರಾಸರಿ ಗರಿಷ್ಠ ತಾಪಮಾನ 36 ಡಿಗ್ರಿಯಷ್ಟಿದ್ದರೆ ಕನಿಷ್ಠ ತಾಪಮಾನ 22 ಡಿಗ್ರಿಯಷ್ಟು ಕಂಡುಬರಲಿದೆ.