ಬೆಂಗಳೂರು: ಉಷ್ಣಗಾಳಿ ಜೊತೆಗೆ ಇಂದು ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮಳೆಯಾಗುವ ಸೂಚನೆಯಿದೆ. ಇಂದು ರಾಜ್ಯದ ಹವಾಮಾನ ಹೇಗಿರಲಿದೆ ಇಲ್ಲಿದೆ ವರದಿ.
ಕರ್ನಾಟಕದಲ್ಲಿ ಈಗ ವಿಪರೀತ ಬಿಸಿಲು, ತಾಪಮಾನ ಗರಿಷ್ಠ ಮಟ್ಟಕ್ಕೆ ತಲುಪುತ್ತಿದೆ. ಹಗಲು ಮನೆಯಿಂದ ಹೊರಗೆ ಕಾಲಿಡಲೂ ಆಗದಷ್ಟು ಬಿಸಿಲು ಕಂಡುಬರುತ್ತಿದೆ. ಇದರ ನಡುವೆಯೂ ಕೆಲವು ಜಿಲ್ಲೆಗಳಲ್ಲಿ ಮಳೆಯ ಸೂಚನೆ ಕಂಡುಬರುತ್ತಿದೆ.
ವಿಶೇಷವಾಗಿ ಇಂದು ಕೊಡಗು, ಉಡುಪಿ, ಉತ್ತರ ಕನ್ನಡ, ಬೆಳಗಾವಿ ಜಿಲ್ಲೆಗಳಲ್ಲಿ ಇಂದು ಬಿಸಿಲಿನ ಜೊತೆಗೆ ಮಳೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಇದರ ಹೊರತಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಭಾಗಶಃ ಮೋಡ ಕವಿದ ವಾತಾವರಣವಿರುವ ಸಾಧ್ಯತೆಯಿದೆ.
ಉಳಿದ ಜಿಲ್ಲೆಗಳಲ್ಲಿ ಇಂದು ಉರಿಬಿಸಿಲಿನ ವಾತಾವರಣವಿರಲಿದೆ. ರಾಯಚೂರು, ಬಳ್ಳಾರಿ, ಕಲಬುರಗಿ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 39-40 ಡಿಗ್ರಿಯವರೆಗೆ ತಲುಪಲಿದೆ. ರಾಜ್ಯದ ಸರಾಸರಿ ಗರಿಷ್ಠ ತಾಪಮಾನ ಇಂದು 36 ಡಿಗ್ರಿಯಷ್ಟು ಮತ್ತು ಕನಿಷ್ಠ ತಾಪಮಾನ 22 ಡಿಗ್ರಿಯಷ್ಟಿರಲಿದೆ.