ಬೆಂಗಳೂರು: ರಾಜ್ಯದಲ್ಲಿ ಈ ವಾರ ನಿರೀಕ್ಷಿಸಿದಷ್ಟು ಮಳೆಯಿಲ್ಲವಾದರೂ ಕೆಲವೆಡೆ ಮಾತ್ರ ಗುಡುಗು ಸಹಿತ ಮಳೆಯಾಗಿತ್ತು. ಈ ವಾರಂತ್ಯಕ್ಕೆ ಮಳೆಯ ಸಾಧ್ಯತೆಯಿದೆಯೇ? ಯಾವ ಜಿಲ್ಲೆಗಳಿಗೆ ಮುನ್ನೆಚ್ಚರಿಕೆ ನೀಡಲಾಗಿದೆ ಇಲ್ಲಿದೆ ನೋಡಿ ವಿವರ.
ಈ ವಾರ ಆರಂಭದ ಮೂರು ದಿನಗಳಲ್ಲಿ ರಾಜ್ಯಾದ್ಯಂತ ಮಳೆಯಿರಲಿಲ್ಲ. ಅತೀ ಹೆಚ್ಚು ಮಳೆಯಾಗುತ್ತಿದ್ದ ಕರಾವಳಿ ಜಿಲ್ಲೆಗಳಲ್ಲೂ ಬಿಸಿಲು ಬಣಗುಡುತ್ತಿತ್ತು. ಬೆಂಗಳೂರಿನಲ್ಲೂ ಬಿಸಿಲಿನ ವಾತಾವರಣವಿತ್ತು. ಆದರೆ ಬುಧವಾರದಿಂದ ಮತ್ತೆ ಕೆಲವು ಕಡೆ ಮಳೆ ಶುರುವಾಗಿದೆ.
ಈ ವಾರಂತ್ಯದಲ್ಲೂ ಕೆಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸೂಚನೆಯಿದೆ. ವಿಶೇಷವೆಂದರೆ ಮಳೆಯ ಜೊತೆಗೆ ಗುಡುಗೂ ಕಂಡುಬರಲಿದೆ. ಕರಾವಳಿ ಜಿಲ್ಲೆಗಳ ಪೈಕಿ ಉತ್ತರ ಕನ್ನಡ ಜಿಲ್ಲೆಯಲ್ಲಿ ವಾರಂತ್ಯಕ್ಕೆ ಭಾರೀ ಮಳೆಯಾಗಲಿದೆ. ಉಡುಪಿಯಲ್ಲಿ ಸಾಧಾರಣ ಮಳೆ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣವಿರಲಿದೆ.
ಬೆಳಗಾವಿ, ವಿಜಯಪುರ, ರಾಯಚೂರು, ಹಾವೇರಿ, ಗದಗ, ಕೊಪ್ಪಳ, ದಾವಣಗೆರೆ, ಬಾಗಲಕೋಟೆ, ಹುಬ್ಬಳ್ಳಿ, ಧಾರವಾಡ, ಬಳ್ಳಾರಿ, ಚಿತ್ರದುರ್ಗ, ಭಾರೀ ಮಳೆಯಾಗಲಿದೆ. ಉಳಿದಂತೆ ಬೀದರ್, ಕೋಲಾರ, ತುಮಕೂರು, ಭದ್ರಾವತಿ, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ಬೆಂಗಳೂರು, ಸಾಧಾರಣ ಮಳೆಯಾಗಲಿದೆ. ಉಳಿದ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಅಥವಾ ಬಿಸಿಲು ಕಂಡುಬರಲಿದೆ.